ಮೈಸೂರು

ಸಮೃದ್ಧ ಆರೋಗ್ಯಕ್ಕಾಗಿ ಸಿರಿಧಾನ್ಯ ‘ಸಾವೆ’ಯ ಬಳಕೆ ಸೂಕ್ತ

ಜಾಗತೀಕರಣದ ಫಲವಾಗಿ ಇಂದು ಆಹಾರ ಪದ್ಧತಿಯೆಡೆಗೂ ಕೂಡ ಪಾಶ್ಚಿಮಾತ್ಯದ ಗಾಳಿ ಬೀಸುತ್ತಿದೆ. ದೇಶಿ ಆಹಾರ ಪದ್ಧದತಿಯನ್ನು ತೊರೆದು ವಿದೇಶಿ ಆಹಾರ ಪದ್ಧತಿ ಕಡೆಗೆ ಜನರು ಹೆಚ್ಚಾಗಿ ವಾಲುತ್ತಿದ್ದಾರೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ರಾಗಿ, ಸಜ್ಜೆ, ಹಾರಕ, ಜೋಳ, ನವಣೆ, ಸಾವೆ, ಬರಗು, ಕೊರಲೆ, ಊದಲು- ಇವು ಒಂಭತ್ತು ಸಿರಿಧಾನ್ಯಗಳು. ಒಂದೊಂದು ಧಾನ್ಯವು ಒಂದೊಂದು ಪ್ರೋಟಿನ್ ‍ನ್ನು ನೀಡುತ್ತದೆ. ಇವು ಗಾತ್ರದಲ್ಲಿ ಚಿಕ್ಕದಾಗಿದ್ದು, ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತವೆ. ಆದರೆ ಇಂದಿನ ಜನತೆಗೆ ಇವುಗಳ ಮಹತ್ವದ ಅರಿವಿಲ್ಲವಾದ್ದರಿಂದ ಈ ಧಾನ್ಯಗಳ ಬಳಕೆ ಹೆಚ್ಚಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಈ ಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ.

ದಸರಾ ಮಹೋತ್ಸವದ ಅಂಗವಾಗಿ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಸಿರಿಧಾನ್ಯಗಳ ಪ್ರಾತ್ಯಕ್ಷಿಕೆಯಲ್ಲಿ ಇಂದು ‘ಸಾವೆ’ ಸಿರಿಧಾನ್ಯದ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿತ್ತು. ಕುಂದಗೋಳದ ಸಂಜೀವಿನಿ ಸಾವಯವ ಬಳಗದಿಂದ ಸಾವಯವ ಕೃಷಿಕರಾದ ವೆಂಕಟೇಶ್ ಮತ್ತು ಶಶಿ ಸಾವೆ ಬೆಳೆಯ ಬಗ್ಗೆ ಮಾತನಾಡಿದರು. ಸಾವೆ ಧಾನ್ಯದ ಪ್ರಯೋಜನಗಳ ಬಗ್ಗೆ ಮಾತನಾಡುತ್ತಾ, ಪಾಶ್ಚಿಮಾತ್ಯ ಆಹಾರ ಪದ್ದತಿಯನ್ನು ತೊರೆದು ದೇಶಿ ಆಹಾರವನ್ನು ಸೇವಿಸಿದರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂದು ಸಲಹೆ ನೀಡಿದರು.

ಸಾವೆಯನ್ನು ಬಳಸಿ ಅನ್ನ, ದೋಸೆ, ಇಡ್ಲಿ, ಪಾಯಸ, ಲಡ್ಡು, ರೊಟ್ಟಿ, ಉಪ್ಪಿಟ್ಟು, ಹೋಳಿಗೆ, ಬಿಸ್ಕೆಟ್, ಮಸಾಲ ವಡೆ, ನುಚ್ಚಿನ ಹುಂಡೆ, ಇನ್ನಿತರ ಸಿಹಿತಿಂಡಿಗಳು, ಹೀಗೆ ವಿವಿಧ ಬಗೆಯ ತಿಂಡಿ-ತಿನಿಸುಗಳನ್ನು ಮಾಡಬಹುದಾಗಿದೆ ಎಂದರು.

ಯಾಂತ್ರೀಕರಣದ ಯುಗದಲ್ಲಿ ಮನುಷ್ಯ ವೇಗದ ಜೀವನ ನಡೆಸುತ್ತಿದ್ದಾನೆ. ಆತನ ಆರೋಗ್ಯ ಕಾಳಜಿ ಮಾಡಿಕೊಳ್ಳುವಲ್ಲಿ ವಿಫಲನಾಗುತ್ತಿದ್ದಾನೆ. ಮಧುಮೇಹ, ರಕ್ತದೊತ್ತಡ ಹೀಗೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾನೆ. ಇಂತಹ ಸಂದರ್ಭಗಳಲ್ಲಿ ಸಿರಿಧಾನ್ಯಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ. ಇವುಗಳಲ್ಲಿ ನಾರಿನಾಂಶ ಅಧಿಕವಾಗಿರುವುದರಿಂದ ದೇಹದ ಸಮತೋಲನವನ್ನು ಕಾಪಾಡುತ್ತದೆ. ಪೋಷಕಾಂಶಗಳು ಹೇರಳವಾಗಿ ದೊರೆಯುತ್ತವೆ ಎಂದು ಮಾಹಿತಿ ನೀಡಿದರು.

ಆದರೆ ಸಿರಿಧಾನ್ಯಗಳಿಗೆ ಯೋಗ್ಯ ಮಾರುಕಟ್ಟೆ ಇಲ್ಲದೇ, ಜಾಹೀರಾತುಗಳ ಪ್ರದರ್ಶನವಿಲ್ಲದೇ ಅವುಗಳ ಬಳಕೆಯು ತುಂಬಾ ಕಡಿಮೆ ಇದೆ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳನ್ನು ಬಳಸಿ ಎಂದು ಹೇಳಿದರು.

 

Leave a Reply

comments

Related Articles

error: