ಮೈಸೂರು

ತಮಿಳುನಾಡಿಗೆ ನೀರು ಬಿಟ್ಟಿರುವುದಕ್ಕೆ ವಿರೋಧ: ಪ್ರತಿಭಟನೆ

ರಾಜ್ಯದ ಜನರಿಗೆ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿ ಇದೀಗ ಮತ್ತೆ ನೀರು ಬಿಡುತ್ತಿರುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರ ನಡೆಯನ್ನು ಖಂಡಿಸಿ ವೀರ ಕನ್ನಡಿಗ ಮಕ್ಕಳ ಬಳಗದ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಗಾಂಧಿ ವೃತ್ತದಲ್ಲಿ ಜಮಾಯಿಸಿದ ಬಳಗದ ಕಾರ್ಯಕರ್ತರು ವಿವಿಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ಅವರು ತಮಿಳುನಾಡಿಗೆ ನೀರು ಬಿಟ್ಟಿರುವುದು ಸರಿಯಲ್ಲ. ರಾಜ್ಯದಲ್ಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿರುವಾಗ ಯಾವ ಪುರುಷಾರ್ಥಕ್ಕಾಗಿ ನೀರು ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಅವಕಾಶ ಕೊಡದ ಪೊಲೀಸ್ ಇಲಾಖೆಯ ನಡೆಯ ವಿರುದ್ಧ ಕಿಡಿಕಾರಿ, ಸರ್ಕಾರದ ಧೋರಣೆಗೆ ಬೇಸತ್ತು ರಾಷ್ಟ್ರಪತಿಯವರಲ್ಲಿ ದಯಾಮರಣವನ್ನು ಕರುಣಿಸುವಂತೆ ಒತ್ತಾಯಿಸಿದರು.

ಸಿಎಂ ತವರು ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಚೇಲಾಗಳಂತೆ ಪೊಲೀಸ್ ಇಲಾಖೆ ವರ್ತಿಸುತ್ತಿರುವುದು ಖಂಡನೀಯ. ಕಾವೇರಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯದ ಜತೆಗೆ ತಮಿಳುನಾಡಿಗೂ ನೀರು ಬಿಡುವ  ತೀರ್ಮಾನಕ್ಕೆ ಬರುವ ಮೂಲಕ ರಾಜ್ಯದ್ರೋಹದ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರಿಗೆ ನ್ಯಾಯಕೊಡಿ ಇಲ್ಲವಾದರೆ ದಯಾಮರಣ ನೀಡಿ ಎಂದು ಪತ್ರ ಬರೆದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ, ಬಳಗದ ಅಧ್ಯಕ್ಷ ಎಸ್.ಸಿ. ರಾಜೇಶ್, ಉಪಾಧ್ಯಕ್ಷ ಆರ್. ಶಿವಮೂರ್ತಿ, ಖಜಾಂಚಿ ಸಿದ್ದಪ್ಪ, ಸಂಚಾಲಕ ಕೆ.ಎಂ.ಜಗದೀಶ್, ನಟರಾಜು ಇನ್ನಿತರರು ಹಾಜರಿದ್ದರು.

Leave a Reply

comments

Related Articles

error: