ಕರ್ನಾಟಕಪ್ರಮುಖ ಸುದ್ದಿಮೈಸೂರು

ಸತ್ತವರ ಮತವನ್ನೂ ಹಾಕಿ ನನ್ನ ಗೆಲ್ಲಿಸಿದ್ದೀರಿ! ಸ್ಷಕ್ಷೇತ್ರದ ಚುನಾವಣಾ ಅಕ್ರಮ ಬಿಚ್ಚಿಟ್ಟರೇ ಮುಖ್ಯಮಂತ್ರಿ

“ನಿಮ್ಮ ಊರಿನ ಎಲ್ಲ ಓಟೂ ನನಗೇ ಬಂದಿದೆ. 600ಕ್ಕೂ ಹೆಚ್ಚು ಮತವಿರುವ ನಿಮ್ಮ ಊರಿನಲ್ಲಿ ಒಂದೇ ಒಂದು ಮತ ಕೂಡ ನೀವು ಬೇರೆಯವರಿಗೆ ಹಾಕಿಲ್ಲ. ಮತದಾರರ ಪಟ್ಟಿಯಲ್ಲಿದ್ದ ಕೆಲವು ಸತ್ತು ಹೋಗಿದ್ದರೂ ಅವರ ಮತಗಳನ್ನೂ ನನಗೆ ಹಾಕಿಸಿ ಗೆಲ್ಲಿಸಿದ್ದೀರಿ! ನಿಮ್ಮ ಋಣ ಮರೆಯಲು ಸಾಧ್ಯವಿಲ್ಲ… ಹಾಗಾಗಿ ನಿಮ್ಮ ಊರಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ” – ಹೀಗೆಂದವರು ಮುಖ್ಯಮಂತ್ರಿ ಸಿದ್ದರಾಮಯ್ಯ.

ವಿಧಾನಸಭಾ ಸ್ವಕ್ಷೇತ್ರ ವರುಣಾದಲ್ಲಿರುವ ಕೆಂಪೇಗೌಡನಹುಂಡಿ ಗ್ರಾಮದಲ್ಲಿ ಅ.6, ಗುರುವಾರದಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬಂದಿದ್ದ ಸಿದ್ದರಾಮಯ್ಯನವರು ಮಾತಿನ ಭರದಲ್ಲಿ ನುಡಿದ ಸತ್ಯವೇ ಇದು? ಎಂಬ ಜಿಜ್ಞಾಸೆ ಹುಟ್ಟಿಕೊಂಡಿದೆ.

ವರುಣಾ ಕ್ಷೇತ್ರದಾದ್ಯಂತ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವೇ ಸ್ಪರ್ಧಿಸಿದ್ದ ಚುನಾವಣೆಯಲ್ಲಿ ನಡೆದ ಚುನಾವಣಾ ಅಕ್ರಮವನ್ನು ಬಹಿರಂಗಪಡಿಸಿದರೇ? ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಸಾಲದು ಎಂಬಂತೆ “ನೀವು ನಿಮ್ಮೂರಿನ ಎಲ್ಲ ಮತಗಳನ್ನೂ ನನಗೇ ನೀಡಿದ್ದೀರಿ. ನಿಮ್ಮ ಋಣ ತೀರಿಸಬೇಕಾಗಿದೆ” ಎನ್ನುವ ಮೂಲಕ “ತಮಗೆ ಮತ ಹಾಕದಿರುವ ಕ್ಷೇತ್ರ ಅಥವಾ ಗ್ರಾಮಗಳಿಗೆ ಅನುದಾನ, ಹಣಕಾಸಿನ ನೆರವು ಲಭಿಸುವುದು ಕಷ್ಟ” ಎನ್ನುವ ಪರೋಕ್ಷ ಸಂದೇಶವನ್ನೂ ರವಾನಿಸಿದ್ದಾರೆಯೇ ಎಂಬ ಭಾವನೆ ಮೂಡಿದೆ.

ತಾವೇ ಸ್ಪರ್ಧಿಸಿದ್ದ ಚುನಾವಣೆಯಲ್ಲಿ ಸತ್ತವರ ಮತವೂ ಚಲಾವಣೆಯಾಗಿದೆ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ರಾಜಕೀಯ ವಲಯಕ್ಕೆ ಗ್ರಾಸ ಒದಗಿಸಿದೆ.

ಆರತಿ ತಟ್ಟೆಗೆ ಮರೀಗೌಡ ಹಣ: ಮೈಸೂರಿನ ನಿಕಟಪೂರ್ವ ಜಿಲ್ಲಾಧಿಕಾರಿ ಸಿ.ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ಮರೀಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನು ಬಿಡುವಂತೆ ಕಾಣಿಸುತ್ತಿಲ್ಲ. ಇದೇ ಪ್ರಕರಣದಲ್ಲಿ ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನು ಪಡೆದು ಆಚೆ ಬಂದ ನಂತರ ಮತ್ತೆ ಸಿದ್ದರಾಮಯ್ಯನವರ ಸುತ್ತ ಗಿರಕಿ ಹೊಡೆಯುತ್ತಿರುವ ಈತ, ವರುಣಾ ಕ್ಷೇತ್ರದ ಮೆಲ್ಲಹಳ್ಳಿಯಲ್ಲಿ ಆರತಿ ತಟ್ಟೆಗೆ ಹಣ ಹಾಕುವ ಸಂದರ್ಭ ಬಂದಾಗ ತಾನೇ ಹಣ ಕೊಡಲು ಮುಂದಾದ ಎನ್ನಲಾಗಿದೆ. ಆದರೆ ಸಿದ್ದರಾಮಯ್ಯ ಹಣ ಪಡೆಯಲು ನಿರಾಕರಿಸಿದಾಗ ಹಿಂದೆ ಸರಿದ ಮರೀಗೌಡ, ಬೇರೆಯವರ ಕೈಗೆ ಹಣ ನೀಡಿ ಅದನ್ನು ಮುಖ್ಯಮಂತ್ರಿಗಳ ಕೈಗೆ ತಲುಪಿಸುವಲ್ಲಿ ಯಶಸ್ವಿಯಾದ ಎಂದು ಮೂಲಗಳು ತಿಳಿಸಿವೆ.

Leave a Reply

comments

Related Articles

error: