ಮೈಸೂರು

3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆಸಲು ತೀರ್ಮಾನ : ಡಿ.ರಂದೀಪ್

ಮೈಸೂರು,ಜೂ.10:- ಮೈಸೂರು ನಗರ ಪ್ರವಾಸಿ ತಾಣವಾಗಿದ್ದು, ನಗರವು ಕಲೆ-ಸಂಸ್ಕೃತಿ-ಪರಂಪರೆ ಮತ್ತು ಸ್ವಚ್ಛತೆಗೆ ಹೆಸರುವಾಸಿಯಾಗಿದ್ದು, ಭಾರತ ದೇಶದ ಯೋಗ ರಾಜಧಾನಿಯೆಂದು ಪ್ರಸಿದ್ಧಿಯಾಗಿದೆ. ವಿಶ್ವದಾದ್ಯಂತ ಯೋಗವನ್ನು ಹರಡುವಲ್ಲಿ ಮೈಸೂರು ವಿಶಿಷ್ಟ ಕೊಡುಗೆಯನ್ನು ನೀಡಿದ್ದು, ಜೂ.21ರಂದು 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ವಿವಿಧ ಭಾಗಿದಾರರ ಸಹಕಾರದೊಂದಿಗೆ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 60ಸಾವಿರ ಯೋಗಪಟುಗಳೊಂದಿಗೆ ಯೋಗಾಭ್ಯಾಸ ಮಾಡಲಾಗುವುದು. ಮೈಸೂರು ಅರಮನೆ, ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಶ್ರೀಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಕೃಷ್ಣರಾಜೇಂದ್ರ ವೃತ್ತ, ದೇವರಾಜ ಅರಸ್ ರಸ್ತೆ, ಮಹಾರಾಣಿ ಕಾಲೇಜು ವೃತ್ತ, ರಾಮಸ್ವಾಮಿ ವೃತ್ತ, ಮಹಾರಾಜ ಕಾಲೇಜು ಮೈದಾನ, ಓವೆಲ್ ಮೈದಾನದಲ್ಲಿ ಬರುವ ರಸ್ತೆಗಳಲ್ಲಿ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಲಾಗಿದೆ. ವೈಷ್ಣವಿ ಸ್ವೀಟ್ಸ್ ಮತ್ತು ಸೈಕಲ್ ಪ್ಯೂರ್ ಅಗರ್ ಬತ್ತೀಸ್ ಪ್ರಾಯೋಜಕತ್ವದ ಮೂಲಕ ಬೃಹತ್ ಕಾರ್ಯಕ್ರಮದ ಭಾಗಿದಾರರಾಗಿದ್ದಾರೆ ಎಂದರು.

ಈ ಬೃಹತ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಹಾಗೂ ಕ್ರಮಬದ್ಧವಾಗಿ ಆಯೋಜಿಸಲು ಜಿಲ್ಲಾಡಳಿತದಿಂದ ಸಂಘಟನೆ, ಕಾನೂನು, ಸುವ್ಯವಸ್ಥೆ ಮತ್ತು ಟ್ರಾಫಿಕ್ ವ್ಯವಸ್ಥೆ, ಮೂಲಭೂತ ಸೌಕರ್ಯಗಳ ವ್ಯವಸ್ಥೆ, ಕುಡಿಯುವ ನೀರು, ಸ್ವಚ್ಛತೆ, ವೈದ್ಯಕೀಯ ಮತ್ತು ಆ್ಯಂಬುಲೆನ್ಸ್ ವ್ಯವಸ್ಥೆ, ಸ್ವಾಗತ, ಶಿಷ್ಟಾಚಾರ, ವಾಸ್ತವ್ಯ, ವಾಹನ ವ್ಯವಸ್ಥೆ ಹಾಗೂ ಆಮಂತ್ರಣ ಮುದ್ರಣ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲುಸ್ತುವಾರಿ, ಸಾರಿಗೆ ವ್ಯವಸ್ಥೆ, ವೇದಿಕೆ ಕಾರ್ಯಕ್ರಮ ವ್ಯವಸ್ಥೆ, ದಾಖಲಾತಿ ಸಮಿತಿ, ಪ್ರಚಾರ ಸಮಿತಿ ಮತ್ತು ಸ್ವಯಂಸೇವಕ ಸಮಿತಿಗಳನ್ನು ರಚಿಸಲಾಗಿದ್ದು ನಿಯೋಜಿಸಿರುವ ಸಮಿತಿಗಳು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮುಂಚಿತವಾಗಿ ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಹಂಚಿಕೆ ಮಾಡಿರುವ ಕರ್ತವ್ಯಗಳನ್ನು ನಿರ್ವಹಿಸಲು ಈಗಾಗಲೇ ನಿರ್ದೆಶನ ನೀಡಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಭಾವೈಕ್ಯತೆ, ಸಾಮರಸ್ಯ ಮತ್ತು ವಿಶ್ವಶಾಂತಿ ಮಂತ್ರ ಸಾರಲು ವಿವಿಧ ಧರ್ಮದ ಧರ್ಮಗುರುಗಳನ್ನು ಆಹ್ವಾನಿಸಲಾಗಿದೆ. ನಗರದಲ್ಲಿ 300ಕ್ಕೂ ಹೆಚ್ಚು ಯೋಗ ತರಬೇತಿ ಕೇಂದ್ರಗಳಿದ್ದು, ಪ್ರತಿನಿತ್ಯ 15ಸಾವಿರ ಯೋಗಾಸಕ್ತರು ತರಬೇತಿ ಪಡೆಯುತ್ತಿದ್ದಾರೆ. 35ಸಾವಿರ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡುತ್ತಿದ್ದಾರೆ. ಅರಮನೆ ಆವರಣದಲ್ಲಿ ಮುಖ್ಯ ವೇದಿಕೆಯಿದ್ದು, ಅರಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಯೋಗ ಮಾಡುವವರಿಗೂ ಮುಖ್ಯವೇದಿಕೆಯಿಂದಲೇ ಯೋಗಾಭ್ಯಾಸದ ಕುರಿತು ನಿರ್ದೇಶನ ನೀಡಲಾಗುತ್ತದೆ. 60ಸಾವಿರ ಜನರಿಗೂ ತಲುಪುವಂತೆ ಧ್ವನಿ ವ್ಯವಸ್ಥೆ ಮಾಡಲಾಗುತ್ತದೆ. ಯೋಗ ಗುರುಗಳನ್ನು ಅನುಕರಣೆ ಮಾಡಲು ಎಲ್ ಇ ಡಿ ಪರದೆಗಳ ವ್ಯವಸ್ಥೆ ಮಾಡಲಾಗುತ್ತದೆ. ವಿವಿಧ ಭಾಗಗಳಿಂದ ಆಗಮಿಸುವ ನಾಗರಿಕರು, ಯೋಗಪಟುಗಳಿಗೆ ಶುಲ್ಕ ರಹಿತ ಸಾರಿಗೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ತುರ್ತು ಚಿಕಿತ್ಸೆಗೆ ವೈದ್ಯರ ತಂಡ ಆ್ಯಂಬುಲೆನ್ಸ್ ಸ್ಥಳದಲ್ಲಿ ಸಿದ್ಧವಿರಲಿದೆ. ಜೂ.11 ಮತ್ತು 18ರಂದು ಪೂರ್ವಭಾವಿ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು. ಇದೇ ಸಂದರ್ಭ ಯೋಗ ದಿನದ ಪೋಸ್ಟರ್ ನ್ನು ಬಿಡುಗಡೆಗೊಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು,  ವಿವಿಧ ಇಲಾಖಾಧಿಕಾರಿಗಳು  ಉಪಸ್ಥಿತರಿದ್ದರು. (ವರದಿ:ಜಿ.ಕೆ,ಎಸ್.ಎಚ್)

Leave a Reply

comments

Related Articles

error: