ಮೈಸೂರು

ಮಧ್ಯಪ್ರದೇಶದ ರೈತರ ಮೇಲಿನ ಗೋಲಿಬಾರ್ ಖಂಡಿಸಿ ಪ್ರತಿಭಟನೆ

ಮೈಸೂರು, ಜೂ.10: ಮಧ್ಯಪ್ರದೇಶದಲ್ಲಿ ರೈತರ ಮೇಲೆ ಬಿಜೆಪಿ ಸರ್ಕಾರ ನಡೆಸಿದ ಗೋಲಿಬಾರ್ ಕ್ರಮವನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಶನಿವಾರ ನಗರದ ರಾಮಸ್ವಾಮಿ ವೃತ್ತದಲ್ಲಿ ಸಮಾವೇಶಗೊಂಡ ಸಮಿತಿಯ ಸದಸ್ಯರು ವಿವಿಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಳೆಗಳಿಗೆ ಬೆಂಬಲ ಬೆಲೆ, ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಗೋಲಿಬಾರ್ ನಡೆಸಿ ಐವರು ರೈತರ ಸಾವಿಗೆ ಕಾರಣವಾಗಿರುವುದು ಖಂಡನೀಯ. ಕಳೆದ ಹಲವಾರು ವರ್ಷಗಳಿಂದಲೂ ಭೀಕರ ಬರಗಾಲಕ್ಕೆ ತುತ್ತಾಗಿರುವ ಮಂಡಸೌರ್ ಜಿಲ್ಲೆಯಲ್ಲಿ ರೈತರು ತಮಗೆ ನ್ಯಾಯ ನೀಡಿ ಎಂದು ಪ್ರತಿಭಟನೆ ನಡೆಸಿದ್ದನ್ನೆ ನೆಪಮಾಡಿಕೊಂಡು ಹತ್ಯೆಗೈದಿದ್ದಾರೆ. ಇದು ಬಿಜೆಪಿ ಸರ್ಕಾರಕ್ಕಿರುವ ರೈತರ ಮೇಲಿನ ಕಾಳಜಿಯನ್ನು ತೋರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಆದಾಯವನ್ನು ದ್ವಿಗುಣಗೊಳಿಸಿ, ಕೃಷಿ ಅಭಿವೃದ್ಧಿಯಲ್ಲಿ ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ ಎಂದು ನೀಡಿದ್ದ ಭರವಸೆಯನ್ನು ಮರೆತ್ತಿದ್ದಾರೆ ಎಂದು ಕಿಡಿ ಕಾರಿದ ಪ್ರತಿಭಟನಾಕಾರರು ಕೂಡಲೇ ಮೃತಪಟ್ಟ ಕುಟುಂಬದರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್‌ಯುಸಿಐನ ಜಿಲ್ಲಾ ಕಾರ್ಯದರ್ಶಿ ಬಿ.ರವಿ, ಸದಸ್ಯರಾದ ಎಂ.ಉಮಾದೇವಿ, ಚಂದ್ರಶೇಖರ್ ಮೇಟಿ, ವಿ.ಯಶೋಧರ್, ಸೀಮಾ ಜಿ.ಎಸ್, ಸಂಧ್ಯಾ, ಹರೀಶ್, ಸುನಿಲ್, ಬಸವರಾಜು, ಸುಮಾ, ಅವಿನಾಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: