ಮೈಸೂರು

ಪರಿಸರದ ಸ್ವಚ್ಛತೆ ಕಾಪಾಡಲು ಯುವ ಜನತೆ ಕೈಜೋಡಿಸಿ : ಜಿ.ಜಗದೀಶ್

ಮೈಸೂರು,ಜೂ.10:- ಮೈಸೂರು ಮಕ್ಕಳ ಕೂಟ, ಎಸ್.ಡಿ.ಎಂ ಮಹಿಳಾ ಕಾಲೇಜು ವತಿಯಿಂದ  ಸೈನ್ಸ್ ಮತ್ತು ನೇಚರ್ ಕ್ಲಬ್, ರಾ.ಸೇ.ಯೋ.ಘಟಕ, ಯೂತ್ ರೆಡ್ ಕ್ರಾಸ್ ಘಟಕ, ರೇಂಜರ್ಸ್ ಘಟಕ, ಹಳೆವಿದ್ಯಾರ್ಥಿ ಸಂಘ, ಶಿಕ್ಷಕ ರಕ್ಷಕ ಸಂಘ, ಐ ಸರ್ವ್ ನೇಷನ್ ಸಂಘ ಇವುಗಳ ಸಹಯೋಗದೊಂದಿಗೆ ಶುಕ್ರವಾರ ಮಧ್ಯಾಹ್ನ ಪರಿಸರ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ಪರಿಸರ ಜಾಗೃತಿ ಜಾಥಾಕ್ಕೆ ಮಹಾನಗರ ಪಾಲಿಕೆ ಆಯುಕ್ತ ಜಿ.ಜಗದೀಶ್  ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪಾಲಿಕೆ ವತಿಯಿಂದಲೂ ನಾವು ಪರಿಸರ ದಿನಾಚರಣೆಯನ್ನು ಆಚರಿಸಿದ್ದೇವೆ. ಪ್ರಕೃತಿಯನ್ನು, ಪರಿಸರವನ್ನು, ನಗರದ ನೈರ್ಮಲ್ಯತೆಯನ್ನು, ಪರಿಸರದ ಸ್ವಚ್ಛತೆಯನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಪೌರಕಾರ್ಮಿಕರನ್ನು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ನಾವು ಹುರಿದುಂಬಿಸುತ್ತೇವೆ. ಇಲ್ಲಿ ದೊಡ್ಡ ಯುವ ಪಡೆಯೇ ಇದೆ. ಈ ಯುವ ಪಡೆ ನಮ್ಮ ಜೊತೆ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಬೇಕು. ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ನಿಮ್ಮ ಮನೆಗಳಲ್ಲಿ ಹಸಿ ಕಸ, ಒಣಕಸಗಳೆಂದು ವಿಂಗಡಿಸಿ ಕೊಡಿ, ನಾವು ಅದನ್ನು ವಿಲೇವಾರಿ ಮಾಡಿಕೊಳ್ಳುತ್ತೇವೆ. ಒಟ್ಟಿನಲ್ಲಿ ನಗರ ನೈರ್ಮಲ್ಯ ಕಾಪಾಡಲು, ಪರಿಸರ ಸ್ವಚ್ಛವಾಗಿರಿಸಲು ನಿಮ್ಮೆಲ್ಲರ ಸಹಕಾರ ಬೇಕು ಎಂದರು.

ಈ ಸಂದರ್ಭ ಎಂ.ಎಂ.ಕೆ ಮತ್ತು ಎಸ್.ಡಿ.ಎಂ ಬಾಲಕಿಯರ ಪ.ಪೂ ಕಾಲೇಜಿನ ಪ್ರಾಂಶುಪಾಲೆ ಎಂ.ವಿ.ಆಶಾ,  ಸಹಾಯಕ ಪೊಲೀಸ್ ಆಯುಕ್ತ ಸಿ.ಮಲ್ಲಿಕ್, ಪ್ರಾಂಶುಪಾಲ ಕೆ.ವಿ.ದಾಮೋದರ್ ಗೌಡ, ಬಿ.ಮಂಜುನಾಥ್  ಮತ್ತಿತರರು ಉಪಸ್ಥಿತರಿದ್ದರು.

ಪರಿಸರ ನಾಶ ಜೀವ ಸಂಕುಲದ ವಿನಾಶ, ಬೇಡ ಹೇಳಿ ಪ್ಲಾಸ್ಟಿಕ್, ಮಾಡಿ ಜೀವನ ಕ್ಲಾಸಿಕ್, ಒಂದು ಗಿಡ ನೆಡು, ಜೀವನ ಪೂರ್ತಿ ಸಂತೋಷಪಡು, ಹೊಗೆ ರಹಿತ ವಾಹನ ಮಾನವನ ಜೀವನ ಪಾವನ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಫಲಕಗಳು ಹಾಗೂ ಘೋಷಣೆಗಳೊಂದಿಗೆ ನೂರಾರು ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪರಿಸರ ಜಾಗೃತಿ ಮೂಡಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: