ಕರ್ನಾಟಕ

ನಗರ ಕಾಂಗ್ರೆಸ್ ಸಮಿತಿ ಸಭೆ : ನಿವೇಶನ ರಹಿತ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಪ್ರೇರಣೆ : ಟಿ.ಪಿ.ರಮೇಶ್

ರಾಜ್ಯ(ಮಡಿಕೇರಿ) ಜೂ.10 :-ನಿವೇಶನ ರಹಿತ ಅರ್ಹ ಫಲಾನುಭವಿಗಳು 94 ಸಿಸಿ ಅರ್ಜಿ ಸಲ್ಲಿಸುವ ಕಾಲಾವಧಿಯನ್ನು ಸರಕಾರ ಮೂರು ತಿಂಗಳಿಗೆ ವಿಸ್ತರಿಸಿದ್ದು, ಈ ಬಗ್ಗೆ ನಗರ ಕಾಂಗ್ರೆಸ್ ಸಮಿತಿ ಜನಸಾಮಾನ್ಯರಿಗೆ ಮಾಹಿತಿ ಒದಗಿಸಬೇಕೆಂದು ಜಿಲ್ಲಾ ಕಾಂಗ್ರೆಸ್‍ನ ಪ್ರಭಾರ ಅಧ್ಯಕ್ಷ ಟಿ.ಪಿ.ರಮೇಶ್ ಸಲಹೆ ನೀಡಿದ್ದಾರೆ.

ನಗರ ಕಾಂಗ್ರೆಸ್ ಸಮಿತಿಯ ಸಭೆಯು ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಟಿ.ಪಿ.ರಮೇಶ್, ನಗರದ 23 ವಾರ್ಡ್‍ಗಳಲ್ಲಿ ಬೂತ್ ರಚನೆಯನ್ನು ಸಂಪೂರ್ಣಗೊಳಿಸಿ 15 ದಿನಕ್ಕೊಂದು ಬಾರಿ ಕಾಂಗ್ರೆಸ್ ಕಛೇರಿಯಲ್ಲಿ ಸಭೆ ನಡೆಸಬೇಕೆಂದು ತಿಳಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು. 94 ಸಿಸಿ ಅರ್ಜಿ ಸಲ್ಲಿಕೆಯ ಅವಧಿಯನ್ನು ರಾಜ್ಯ ಸರಕಾರ ಮೂರು ತಿಂಗಳುಗಳಿಗೆ ವಿಸ್ತರಿಸಿದ್ದು, ಸಾರ್ವಜನಿಕರು, ವಸತಿ ರಹಿತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಆರ್ಥಿಕವಾಗಿ ಹಿಂದುಳಿದ ವರ್ಗದ ಮಂದಿಗೆ ಅರ್ಜಿ ಸಲ್ಲಿಸಲು ಪ್ರೇರಣೆಯನ್ನು ನೀಡಬೇಕು. ಈಗಾಗಲೆ ಅರ್ಜಿ ಸಲ್ಲಿಸಿದವರಿಗೆ ಶೀಘ್ರ ಪಟ್ಟೆ ವಿತರಣೆ ಮಾಡಬೇಕೆಂದು ಪದಾಧಿಕಾರಿಗಳು ಸಭೆಯಲ್ಲಿ ಒತ್ತಾಯಿಸಿದರು.ನಂತರ ಕಾಂಗ್ರೆಸ್ ಕಾರ್ಯಕರ್ತರ ಕುಂದುಕೊರತೆಗಳ ಬಗ್ಗೆ ಜಿಲ್ಲಾಧ್ಯಕ್ಷರು ಚರ್ಚಿಸಿದರು.

ಮೂಡಾ ಅಧ್ಯಕ್ಷರಾದ ಚುಮ್ಮಿ ದೇವಯ್ಯ, ಮಾಜಿ ಅಧ್ಯಕ್ಷರಾದ ಸುರಯ್ಯ ಅಬ್ರಾರ್,  ನಗರ ಕಾಂಗ್ರೆಸ್ ಉಪಾಧ್ಯಕ್ಷರಾದ ಟಿ.ಪಿ.ನಾಣಯ್ಯ, ಟಿ.ಪಿ. ರಾಜೇಂದ್ರ, ನಗರಸಭಾ ಸದಸ್ಯರಾದ ಪ್ರಕಾಶ್ ಆಚಾರ್ಯ, ಉದಯ್ ಕುಮಾರ್, ಯತೀಶ್ ಕುಮಾರ್, ಪ್ರಮುಖರಾದ ಹೆಚ್.ಎಮ್.ಚಂದ್ರು, ಕೆ.ಕೆ. ಉತ್ತಯ್ಯ, ಸತೀಶ್ ಪೈ, ಹನೀಪ್, ವಿಜಯ್, ವಸಂತ್ ಭಟ್, ಕೌಸರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುನೀರ್ ಮಾಚರ್ ಸ್ವಾಗತಿಸಿ, ಪ್ರಮುಖರಾದ ಜಪ್ರಲ್ಲಾ ಎಂ.ಕೆ. ವಂದಿಸಿದರು. (ವರದಿ:ಕೆಸಿಐ,ಎಸ್.ಎಚ್)

 

Leave a Reply

comments

Related Articles

error: