ಕರ್ನಾಟಕ

ಸೂಕ್ಷ್ಮ ಪರಿಸರ ವಲಯ ಆದೇಶದಿಂದ ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ: ಕೆ.ಜಿ.ಬೋಪಯ್ಯ

ಮಡಿಕೇರಿ, ಜೂ.10: ಪಶ್ಚಿಮ ಘಟ್ಟ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡಿರುವುದಕ್ಕೆ ಜಿಲ್ಲೆಯ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಹೇಳಿದ್ದಾರೆ.

ಸಂಪಾಜೆಯ ಪಯಸ್ವಿನಿ ಸಹಕಾರ ಸದನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಂಪಾಜೆ ಗ್ರಾ.ಪಂ.ಜನತೆಗೆ ಅಭಿನಂದನೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಬಳಿಕ ಸಭಾ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಬ್ರಹ್ಮಗಿರಿ, ಪುಷ್ಪಗಿರಿ, ನಾಗರಹೊಳೆ, ತಲಕಾವೇರಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಿದ್ದರೂ ಸಹ ಗಾಬರಿಯಾಗುವ ಅಗತ್ಯವಿಲ್ಲ ಎಂದು ಕೆ.ಜಿ.ಬೋಪಯ್ಯ ಅವರು ಸ್ಪಷ್ಟಪಡಿಸಿದ್ದಾರೆ.

ಭಾರತ ಸರ್ಕಾರ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಆದೇಶ ಹೊರಡಿಸಿದ್ದರೂ ಸಹ, ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯ ಶಾಸಕರನ್ನು ಒಳಗೊಂಡ ಸಮಿತಿ ಇದ್ದು, ಈ ಸಮಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಅವಕಾಶವಿದೆ. ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕರು ನುಡಿದರು. ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡಬಾರದು ಎಂದು ಬಹಳ ವರ್ಷಗಳಿಂದಲೂ ವಿರೋಧಿಸಿಕೊಂಡು ಬರಲಾಗಿತ್ತು, ಪ್ರಸ್ತುತ ಸಂದರ್ಭದಲ್ಲಿಯೂ ಅಮೇರಿಕಾದ ಅಧ್ಯಕ್ಷರೂ ಯುನೆಸೆಫ್‍ಗೆ ತಮ್ಮ ದೇಶದ ಕೆಲವು ಪ್ರದೇಶ ಹಾಗೂ ಕಟ್ಟಡಗಳನ್ನು ಸೇರಿಸಲು ಬಾರಿ ಪ್ರತಿರೋಧ ವ್ಯಕ್ತಪಡಿಸುವುದನ್ನು ಕಾಣುತ್ತಿದ್ದೇವೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸ್ಮರಿಸಿದರು.

ಕೊಡಗಿನ ಜನರು ದೇವಕಾಡು  ಹಾಗೂ ಅರಣ್ಯವನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಅನಾದಿ ಕಾಲದಿಂದಲೂ ಗಿಡ-ಮರ, ಮಳೆ ನಡುವೆ ಬದುಕು ಕಟ್ಟಿಕೊಂಡು ಬಂದಿರುವ ಜನರ ಜೀವನವೂ ಮುಖ್ಯ. ಪರಿಸರ ಸಂರಕ್ಷಣೆ ಮಾಡುವಲ್ಲಿ ಕೊಡಗಿನ ಜನರಿಗೆ ಬೇರೆಯವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಕೆ.ಜಿ.ಬೋಪಯ್ಯ ಅವರು ನುಡಿದರು. ರಾಜ್ಯದಲ್ಲಿ ವನ್ಯಪ್ರಾಣಿಗಳ  ಸಂಖ್ಯೆ ಹೆಚ್ಚಿದೆ. ಹಾಗೆಯೇ ಕಾಡಾನೆ ಹಾವಳಿಯಿಂದ  ಮೃತಪಟ್ಟವರ ಸಂಖ್ಯೆಯೂ ಹೆಚ್ಚಿನದ್ದಾಗಿದೆ ಎಂದರು. (ವರದಿ: ಕೆಸಿಐ, ಎಲ್.ಜಿ)

 

Leave a Reply

comments

Related Articles

error: