
ಕರ್ನಾಟಕಪ್ರಮುಖ ಸುದ್ದಿಮೈಸೂರು
ಜನಸಂಪರ್ಕ ಸಭೆಯಲ್ಲಿ ದೀನದಲಿತರ ಸ್ಥಿತಿ ಗತಿ ಅರಿಯುವ ಪ್ರಯತ್ನ ಮಾಡಿದ್ದೇನೆ : ಯಡಿಯೂರಪ್ಪ
ಮೈಸೂರು,ಜೂ.11:- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಭಾನುವಾರ ಮೈಸೂರು ಜಿಲ್ಲೆಯಲ್ಲಿ ಜನಸಂಪರ್ಕ ಅಭಿಯಾನವನ್ನು ವೀರನಗೆರೆಯ ಎಫ್.ಟಿ.ಎಸ್ ವೃತ್ತದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆರಂಭಿಸಿದರು.
ಮೈಸೂರಿನಲ್ಲಿ ದಲಿತರ ಕಾಲೋನಿಗೆ ಭೇಟಿ ನೀಡಿದ ಯಡಿಯೂರಪ್ಪ ಕುರಿಮಂಡಿ ಕೆಸರೆಯಲ್ಲಿರುವ ದಲಿತರ ಕಾಲೋನಿಗೆ ಭೇಟಿ ನೀಡಿ ಎನ್.ಆರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿಯವರ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಿದರು. ಆತಿಥ್ಯ ನೀಡಿದ ನರಸಿಂಹ ಮೂರ್ತಿ ದಂಪತಿಗೆ ಧನ್ಯವಾದ ಹೇಳಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬರಪ್ರವಾಸ ನಿಮಿತ್ತ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ.ಇಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದೇನೆ.ದಲಿತರ ಕಾಲೋನಿಗಳಿಗೆ ಭೇಟಿ ನೀಡಲಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಜನಸಂಪರ್ಕ ಸಭೆಯಲ್ಲಿ ದೀನದಲಿತರ ಸ್ಥಿತಿ ಗತಿ ಅರಿಯುವ ಪ್ರಯತ್ನ ಮಾಡಿದ್ದೇನೆ.ಸಿ ಎಂ ಸಿದ್ದರಾಮಯ್ಯ ಒಂದೇ ಒಂದು ದಿನವು ದಲಿತರ ಮನೆಯಲ್ಲಿ ಊಟ ಮಾಡದೆ ನನ್ನನ್ನು ಟೀಕೆ ಮಾಡೋದು ಸರಿಯಲ್ಲ ಎಂದು ಸಿ ಎಂ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.
ಈ ಭಾಗದ ಜನರಿಗೆ ಡೆಂಗ್ಯೂ ಜ್ವರ ಇದ್ದರೂ ಸಿ ಎಂ ಅವರ ಕಷ್ಟ ಆಲಿಸುತ್ತಿಲ್ಲ.ನಿಮ್ಮ ಜಿಲ್ಲೆಯ ಜನರಿಗೆ ಶುದ್ದ ಕುಡಿಯುವ ನೀರನ್ನು ಪೂರೈಸೋಕೆ ಆಗುತ್ತಿಲ್ಲ ಅಂದರೆ ನಿಮ್ಮ ಆಡಳಿತ ವೈಖರಿ ಎಂತಹದ್ದು ಅನ್ನೋದು ಜನರಿಗೆ ತಿಳಿದಿದೆ.ದಲಿತ ಸಮುದಾಯದ ನಾಯಕರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್ ನವರು. ಅರವತ್ತು ವರ್ಷ ಕಾಂಗ್ರೆಸ್ ದೇಶ ಆಳಿದರೂ ದಲಿತರು ಇನ್ನೂ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಡಾ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿದ್ದು ಬಿಜೆಪಿ ಸಮ್ಮಿಶ್ರ ಸರ್ಕಾರ. ಬಾಬಾ ಜಗಜೀವನ್ ರಾಮ್, ಮಹಾತ್ಮಗಾಂಧಿ ಅಂತಹ ಮಹನೀಯರ ಹೆಸರು ಹೇಳಲು ಕಾಂಗ್ರೆಸ್ ನಾಯಕರಿಗೆ ಯೋಗ್ಯತೆ ಇಲ್ಲ ಭಾರತೀಯ ಜನತಾ ಪಾರ್ಟಿಯನ್ನು ಅನೇಕ ದಲಿತ ಮುಖಂಡರು ಸೇರಲಿದ್ದಾರೆ. ಸ್ಲಂ ಹಾಗೂ ದಲಿತ ಮೊಹಲ್ಲಾ ಗಳಿಗೆ ಉದ್ಯೋಗ ಹಾಗೂ ಉತ್ತಮ ಜೀವನ ಸಿಗುವಂತೆ ಮಾಡುವುದೇ ನಮ್ಮ ಗುರಿ. ಕೇಂದ್ರ ಸರ್ಕಾರ ಬಡವರ ಏಳ್ಗೆಗೆ ಶ್ರಮಿಸುತ್ತಿದೆ. ನರೆಂದ್ರ ಮೋದಿ ದಲಿತ ಮಹಿಳೆಯರ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತನ್ನಿಎಂದರು.
ಮಾಜಿ ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಎಸ್.ಎ ರಾಮದಾಸ್, ಎಂ. ಶಿವಣ್ಣ, ಸಂಸದ ಪ್ರತಾಪ್ ಸಿಂಹ, ಕೆ.ಶಿವರಾಮು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು, ನೂರಾರು ಬಿಜೆಪಿ ಕಾರ್ಯಕರ್ತರಿಂದ ಯಡಿಯೂರಪ್ಪ ಜೊತೆಗಿದ್ದರು.(ವರದಿ:ಕೆ.ಎಸ್,ಎಸ್.ಎಚ್)