ಮೈಸೂರು

ಹೊಟ್ಟೆಪಾಡಿಗಾಗಿ ಬಾಲ್ಯದಲ್ಲೇ ಮಕ್ಕಳ ಭವಿಷ್ಯ ಚಿವುಟದಿರಿ : ಸಿ.ಎಂ ಜೋಶಿ

ಮೈಸೂರು, ಜೂ. 12- ತಮಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಪೋಷಕರು ತಮ್ಮ ಚಿಕ್ಕ ಮಕ್ಕಳನ್ನು ಬಾಲ್ಯದಲ್ಲೇ ಕೆಲಸಕ್ಕೆ ಸೇರಿಸದೆ ಉತ್ತಮ ರೀತಿಯ ಶಿಕ್ಷಣ ಕೊಡಿಸಬೇಕು ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ ಜೋಶಿ ತಿಳಿಸಿದರು.
ಸೋಮವಾರ ಬೆಳಿಗ್ಗೆ ನಗರದ ಜೆ.ಎಲ್.ಬಿ ರಸ್ತೆಯಲ್ಲಿರುವ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಾಲಕಾರ್ಮಿಕ ಯೋಜನಾ ಸೊಸೈಟಿ, ಸ್ವಯಂ ಸೇವಾ ಸಂಸ್ಥೆಗಳ ಸಂಯಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ಸಮಾಜದಲ್ಲಿ ಕೆಲವು ಜನಾಂಗದವರು ತಮ್ಮ ಹೊಟ್ಟೆ ಪಾಡಿಗಾಗಿ ತಮ್ಮ ಮಕ್ಕಳನ್ನು ಅಂಗಡಿಗಳು, ಹೋಟೆಲ್‍ಗಳು, ಕಾರ್ಖಾನೆಗಳು ಹಾಗೂ ಸುಲಭವಾಗಿ ಸಿಗುವ ಕೆಲಸಗಳಿಗೆ ಸೇರಿಸುವುದರ ಮೂಲಕ ಅವರ ಭವಿಷ್ಯವನ್ನು ಚಿವುಟಿ ಹಾಕುತ್ತಿದ್ದಾರೆ. ಈ ರೀತಿಯ ಕೆಲಸಗಳಿಗೆ ಸೇರ್ಪಡೆಗೊಂಡ ಬಾಲಕಾರ್ಮಿಕರ ಮನಸ್ಥಿತಿ ಪಲ್ಲಟಗೊಳ್ಳುತ್ತದೆ. ಹಾಗಾಗಿ ಈ ದಿಸೆಯಲ್ಲಿ ಪೋಷಕರು ತಮಗೆ ಎಷ್ಟೇ ಕಷ್ಟ ಕಾರ್ಪಣ್ಯಗಳಿದ್ದರೂ ತಮ್ಮ ಮಕ್ಕಳನ್ನು ಕೆಲಸಕ್ಕೆ ಸೇರಿಸಬಾರದೆಂದು ಜೋಶಿ ಮನವಿ ಮಾಡಿದರು.
ತಮ್ಮ ಮಕ್ಕಳನ್ನು ಈ ರೀತಿಯ ಕೆಲಸಗಳಿಗೆ ಕಳುಹಿಸುವುದರ ಬದಲು ಅವರಿಗೆ ವಿದ್ಯಾಭ್ಯಾಸವನ್ನು ನೀಡಿದಲ್ಲಿ ಅವರ ಭವಿಷ್ಯ ಉಜ್ವಲಗೊಳ್ಳುವುದಲ್ಲದೇ ದೇಶವು ಪ್ರಗತಿ ಹೊಂದುತ್ತದೆ. ಈ ದಿಸೆಯಲ್ಲಿ ಪೋಷಕರು ಹೆಚ್ಚು ಗಮನ ಹರಿಸುವಂತೆ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ 16 ವರ್ಷದೊಳಗಿನವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವವರ ವಿರುದ್ಧ ಕಾನೂನು ರೀತ್ಯಾ ಕ್ರಮಕೈಗೊಳ್ಳಲು ಸರ್ಕಾರ ಆದೇಶಿಸಿರುವುದರಿಂದ ಮಾಲೀಕರು ಈ ಬಗ್ಗೆ ಎಚ್ಚರ ವಹಿಸುವಂತೆ ಜೋಶಿ ಸಲಹೆ ನೀಡಿದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕಿ ಕೆ.ರಾಧಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಬಿ.ಎಸ್.ಪ್ರಭಾ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಉಪನಿರ್ದೇಶಕ ಡಿ.ಸಿ ಜಗದೀಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: