ಕರ್ನಾಟಕ

ಆಡಳಿತ ವೈಫಲ್ಯದ ಆರೋಪ : ಅಧ್ಯಕ್ಷರ ವಿರುದ್ಧ ಅವಿಶ್ವಾಸದ ಧ್ವನಿ : ಸ್ವಪಕ್ಷೀಯರಿಂದಲೇ ಮುಜುಗರ

ರಾಜ್ಯ(ಮಡಿಕೇರಿ) ಜೂ.12 :- ನಗರಸಭೆಯ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದ್ದು, ಇದಕ್ಕೆ ಅಧ್ಯಕ್ಷರೇ ನೇರ ಹೊಣೆ ಎನ್ನುವ ಆರೋಪ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೇಳಿ ಬಂತು. ಆಡಳಿತ ಪಕ್ಷದ ಸದಸ್ಯರು ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರ ವಿರುದ್ಧ ಅವಿಶ್ವಾಸದ ನಿರ್ಣಯದ ಎಚ್ಚರಿಕೆಯನ್ನು ನೀಡಿದರೆ, ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿದರು.

ನಗರಸಭಾ ಸಭಾಂಗಣದಲ್ಲಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಗರಸಭೆಯ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷರ ಕಾರ್ಯವೈಖರಿಯ ವಿರುದ್ಧ ಬಹುತೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಅಧಿಕಾರ ಬಿಡುವಂತೆ ಒತ್ತಾಯಿಸಿದರು. ಆಡಳಿತ ಪಕ್ಷ ಕಾಂಗ್ರೆಸ್‍ನ ಹಿರಿಯ ಸದಸ್ಯರಾದ ಕೆ.ಎಂ.ಗಣೇಶ್ ಅವಿಶ್ವಾಸ ನಿರ್ಣಯ ತರುವ ಎಚ್ಚರಿಕೆಯನ್ನು ನೀಡುವ ಮೂಲಕ ಕಾವೇರಮ್ಮಸೋಮಣ್ಣ ಅವರನ್ನು ಮುಜುಗರಕ್ಕೀಡು ಮಾಡಿದರು. ನಗರದ ವಿವಿಧ ವಾರ್ಡ್‍ಗಳ ಅವ್ಯವಸ್ಥೆ ಕುರಿತು ಸದಸ್ಯರು ಟೀಕಾ ಪ್ರಹಾರ ನಡೆಸುತ್ತಿದ್ದಾಗ ಮಾತನಾಡಿದ ಕೆ.ಎಂ.ಗಣೇಶ್, ನಾನೊಬ್ಬ ಆಡಳಿತ ಪಕ್ಷದ ಸದಸ್ಯನಾಗಿದ್ದುಕೊಂಡು ಅಧ್ಯಕ್ಷರ ಕಾರ್ಯ ವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಬೇಕಾಗಿದೆ ಎಂದರು. ಅಧ್ಯಕ್ಷರು ಯಾವುದೇ ವಿಚಾರಗಳ ಬಗ್ಗೆ ಸಭೆಗೆ ಸರಿಯಾದ ಮಾಹಿತಿ ಅಥವಾ ಉತ್ತರವನ್ನು ನೀಡುತ್ತಿಲ್ಲ, ರೂಲಿಂಗ್ ನೀಡುವ ಕಾರ್ಯವನ್ನು ಕೂಡ ಮಾಡುತ್ತಿಲ್ಲ. ಮಳೆಗಾಲ ಆರಂಭವಾಗಿದ್ದು, ರೋಗಗಳು ಹರಡುವ ಸನ್ನಿವೇಶ ಎದುರಾಗಿದ್ದರೂ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಯುಜಿಡಿ ಕಾಮಗಾರಿಯಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ, ಕಚೇರಿಯಲ್ಲಿ ಕಡತಗಳು ವಿಲೇವಾರಿಯಾಗುತ್ತಿಲ್ಲ, ಅಭಿವೃದ್ಧಿ ಕಾರ್ಯಗಳು ಕೂಡ ಕುಂಠಿತವಾಗಿದೆ. ಒಟ್ಟಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದ್ದು, ಅಧ್ಯಕ್ಷರು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ಖಡಕ್ ಆಗಿ ಎಚ್ಚರಿಕೆ ನೀಡುತ್ತಿದ್ದೇನೆ, ಅಧ್ಯಕ್ಷರೇ ನೀವು ನಿಮ್ಮ ಕಾರ್ಯ ವೈಖರಿಯನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ನಾವೇ ಅವಿಶ್ವಾಸ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ” ಎಂದು ಹೇಳುವ ಮೂಲಕ ಅಧ್ಯಕ್ಷರು ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಹೊಂದಾಣಿಕೆಯ ಕೊರತೆ ಇದೆ ಎನ್ನುವುದನ್ನು ಸಭೆಯಲ್ಲಿ ಸಾಕ್ಷೀಕರಿಸಿದರು. ಈ ನಡುವೆ ಕಾವೇರಮ್ಮ ಸೋಮಣ್ಣ ಅವರ ರಾಜಿನಾಮೆಗೆ ಬಿಜೆಪಿ ಸದಸ್ಯರು ಕೂಡ ಒತ್ತಾಯಿಸಿದ ಪ್ರಸಂಗ ನಡೆಯಿತು. ನಗರದ ಮಂಗಳೂರು ರಸ್ತೆಯಲ್ಲಿ ನೂತನವಾಗಿ ಆರಂಭವಾಗಿರುವ ಸಸ್ಯಹಾರಿ ಹೋಟೆಲ್‍ಗೆ ಪರವಾನಗಿ ನೀಡಲು ಸಮರ್ಪಕವಾದ ದಾಖಲೆಗಳಿಲ್ಲವೆಂದು ಪೌರಾಯುಕ್ತರು ತಿಳಿಸಿದ್ದರೂ ಇದಕ್ಕೆ ವಿರುದ್ಧವಾಗಿ ಅಧ್ಯಕ್ಷರು ಆದೇಶವೊಂದನ್ನು ಹೊರಡಿಸಿದ್ದಾರೆ. ಹೊಟೇಲ್ ಪರವಾದ ಈ ಆದೇಶವು ಅಧ್ಯಕ್ಷರ ಲೆಟರ್ ಪ್ಯಾಡ್‍ನಲ್ಲಿದ್ದು, ಅಧ್ಯಕ್ಷರ ಸಹಿಯೊಂದಿಗೆ ಸದಸ್ಯರಾದ ಕೆ.ಜಿ.ಪೀಟರ್ ಅವರ ಸಹಿಯೂ ಇದೆ. ಅಧ್ಯಕ್ಷರ ಲೆಟರ್ ಪ್ಯಾಡ್‍ಗೆ ಗೌರವವಿಲ್ಲವೇ ಎಂದು ಪ್ರಶ್ನಿಸಿದ ಬಿಜೆಪಿ ಸದಸ್ಯ ಪಿ.ಡಿ.ಪೊನ್ನಪ್ಪ, ಎಲ್ಲಾ ಗೊಂದಲಗಳಿಗೂ ಅಧ್ಯಕ್ಷರೇ ನೇರ ಹೊಣೆ ಎಂದು ಆರೋಪಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಎಸ್.ರಮೇಶ್ ಮಾತನಾಡಿ ಅಧ್ಯಕ್ಷರ ಲೆಟರ್ ಪ್ಯಾಡ್‍ನಲ್ಲಿ ಪೀಟರ್ ಅವರ ಸಹಿ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ನೀವು ಅಧ್ಯಕ್ಷ ಸ್ಥಾನದಲ್ಲಿರಲು “ಅನ್ ಫಿಟ್” ಎಂದು ಟೀಕಿಸಿದರು. ಬಿಜೆಪಿ ಸದಸ್ಯರು ಅಧ್ಯಕ್ಷರ ರಾಜಿನಾಮೆಗೆ ಒತ್ತಾಯಿಸಿದರೆ, ಎಸ್‍ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಅಧ್ಯಕ್ಷರು ಹಾಗೂ ಪೌರಾಯುಕ್ತರ ನಡುವೆ ಹೊಂದಾಣಿಕೆಯ ಕೊರತೆ ಇದೆ.  ಉಪಾಧ್ಯಕ್ಷರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ಸರಿಪಡಿಸಿ ಎಂದು ಸಲಹೆ ನೀಡಿದರು. ಅಧ್ಯಕ್ಷರ ಲೆಟರ್ ಪ್ಯಾಡ್‍ನಲ್ಲಿ ಸದಸ್ಯರೊಬ್ಬರು ಸಹಿ ಮಾಡಿದ ಕಾರಣಕ್ಕಾಗಿ ಅಧ್ಯಕ್ಷರು ಕ್ಷಮೆ ಕೋರಬೇಕೆಂದು ಪಿ.ಡಿ.ಪೊನ್ನಪ್ಪ ಒತ್ತಾಯಿಸಿದಾಗ ಅದಕ್ಕೆ ಕಾವೇರಮ್ಮ ಸೋಮಣ್ಣ ಸಮ್ಮತಿ ಸೂಚಿಸಿದರು. ಉಪಾಧ್ಯಕ್ಷರಾದ ಟಿ.ಎಸ್.ಪ್ರಕಾಶ್ ಕೂಡ ಅಧ್ಯಕ್ಷರ ವಿರುದ್ಧ ಹರಿಹಾಯ್ದರು.

ಕಾನೂನಿನ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಿನಿಂದ ನಗರಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡ ಕಾರಣಕ್ಕಾಗಿ ನಮ್ಮ ವಾರ್ಡ್‍ಗಳನ್ನು ಕಡೆಗಣಿಸಲಾಗಿದೆಯೆಂದು ಸದಸ್ಯರಾದ ವೀಣಾಕ್ಷಿ ಹಾಗೂ ಶ್ರೀಮತಿ ಬಂಗೇರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯತ್ವ ಅನರ್ಹ ಗೊಂಡ ಬಳಿಕ ನಮ್ಮ ವಾರ್ಡ್‍ಗಳ ಜವಾಬ್ದಾರಿಯನ್ನು ಅಧ್ಯಕ್ಷರು ಹಾಗೂ ಪೌರಾಯುಕ್ತರು ವಹಿಸಿಕೊಳ್ಳಬೇಕಾಗಿತ್ತು. ಆದರೆ, ಕಳೆದ ಎರಡು ತಿಂಗಳಿನಿಂದ ಯಾವುದೇ ಕೆಲಸ ಕಾರ್ಯಗಳನ್ನು ನಮ್ಮ ವಾರ್ಡ್‍ಗಳಲ್ಲಿ ನಡೆಸಿಲ್ಲವೆಂದು ಆರೋಪಿಸಿದರು. ನಾವು ಅನರ್ಹಗೊಂಡಿದ್ದರೆ ವಾರ್ಡ್‍ನ ಜನರು ಏನು ತಪ್ಪು ಮಾಡಿದ್ದಾರೆ ಎಂದು ಪ್ರಶ್ನಿಸಿದ ವೀಣಾಕ್ಷಿ, ವೈಯಕ್ತಿಕ ದ್ವೇಷವನ್ನು ಬಿಟ್ಟು ಜನಪರ ಕಾಳಜಿ ತೋರಿ ಎಂದು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಕೆಲಸದಲ್ಲಿ ಚಾಲೆಂಜ್ ಮಾಡದೆ ದ್ವೇಷದಲ್ಲಿ ತೊಡಗಿರುವ ನೀವು ಯಾಕೆ ಅಧಿಕಾರದಲ್ಲಿದ್ದೀರ, ಕೆಳಗಿಳಿಯಿರಿ ಎಂದು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಆಡಳಿತ ಪಕ್ಷದ ಸದಸ್ಯ ಕೆ.ಎಂ.ಗಣೇಶ್, ಅಧ್ಯಕ್ಷರೆ ತಪ್ಪಾಗಿದೆ, ಈ ರೀತಿ ಮಾಡಬಾರದಾಗಿತ್ತು. ನಾವು ಕ್ಷಮೆ ಕೇಳಲೇ ಬೇಕಾಗಿದೆ ಎಂದರು. ಬಿಜೆಪಿ ಸದಸ್ಯರು ಕೂಡ ಇಬ್ಬರು ಮಹಿಳಾ ಸದಸ್ಯರ ಪರ ಮಾತನಾಡಿದರು. (ವರದಿ:ಕೆಸಿಐ,ಎಸ್.ಎಚ್)

Leave a Reply

comments

Related Articles

error: