ಕರ್ನಾಟಕ

ಅತಿಸಾರ ಭೇದಿ ನಿಯಂತ್ರಣ : ಪಾಕ್ಷಿಕ ಅಭಿಯಾನಕ್ಕೆ ಚಾಲನೆ

ಮಡಿಕೇರಿ, ಜೂ.12 : ಅತಿಸಾರ ಭೇದಿ ತೀವ್ರ ನಿಯಂತ್ರಣ ಪಾಕ್ಷಿಕ ಅಭಿಯಾನಕ್ಕೆ ಜಿ.ಪಂ.ಸಿಇಓ ಚಾರುಲತಾ ಸೋಮಲ್ ಅವರು ಚಾಲನೆ ನೀಡಿದರು.

ನಗರದ ಆಜಾದ್ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಒ.ಆರ್.ಎಸ್. ದ್ರಾವಣ ಮಿಶ್ರಣ ಮಾಡುವ ಪ್ರಾತ್ಯಕ್ಷಿಕೆ ಮೂಲಕ ನಡೆಯುವ ಪಾಕ್ಷಿಕ ಅಭಿಯಾನವನ್ನು ಉದ್ಘಾಟಿಸಿದರು. ದೇಶದಲ್ಲಿ ಶೇ.10ರಷ್ಟು ಶಿಶು ಮರಣವು ಅತಿಸಾರ ಭೇದಿಯಿಂದ ಉಂಟಾಗುತ್ತಿದೆ. ಆದ್ದರಿಂದ ಇದನ್ನು ತಡೆಯುವ ನಿಟ್ಟಿನಲ್ಲಿ ಅತಿಸಾರ ಭೇದಿ ತೀವ್ರ ನಿಯಂತ್ರಣ ಪಾಕ್ಷಿಕ ಅಭಿಯಾನವನ್ನು ಜೂ.24 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಚಾರುಲತಾ ಸೋಮಲ್ ತಿಳಿಸಿದರು.

ಆರ್.ಸಿ.ಎಚ್.ಅಧಿಕಾರಿ ಡಾ.ನಿಲೇಶ್ ಮಾತನಾಡಿ ಅತಿಸಾರ ಭೇದಿಯಿಂದ ಉಂಟಾಗುವ ಶಿಶು ಮರಣ ತಡೆಯುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಶೇ.10ರಷ್ಟು ಮಕ್ಕಳು ಸಾವಿಗೆ ಸಿಲುಕುತಿದ್ದಾರೆ. ಆದ್ದರಿಂದ ಅತಿಸಾರ ಭೇದಿಯನ್ನು ನಿಯಂತ್ರಿಸುವಲ್ಲಿ ಓ.ಆರ್.ಎಸ್.ದ್ರಾವಣ ನೀಡುವುದು ಮತ್ತು ಝಿಂಕ್ ಮಾತ್ರೆ ನೀಡಿ ಶಿಶು ಮರಣ ತಡೆಯುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ದೇಶದಲ್ಲಿ ಪ್ರತೀ ವರ್ಷ ಅತಿಸಾರ ಭೇದಿಯಿಂದ 1.2 ಲಕ್ಷ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮಕ್ಕಳ ಸಾವನ್ನು ನಿಯಂತ್ರಣ ಮಾಡುವುದೇ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದ ಉದ್ದೇಶವಾಗಿದೆ. ಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಐದು ವರ್ಷದೊಳಗಿನ ಮಕ್ಕಳಿಗೆ ಓ.ಆರ್.ಎಸ್. ಪೊಟ್ಟಣ ವಿತರಣೆ ಮಾಡಲಿದ್ದಾರೆ. ಜೊತೆಗೆ ಗುಂಪು ಸಭೆಗಳನ್ನು ನಡೆಸಿ ಪ್ರಾತ್ಯಕ್ಷಿಕೆ ಮೂಲಕ ಮಕ್ಕಳಿಗೆ ಓ.ಆರ್.ಎಸ್. ನೀಡುವ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.

ಆರೋಗ್ಯ ಕಾರ್ಯಕರ್ತೆಯರು ಎ.ಎನ್.ಎಂ.ಗಳು ಗ್ರಾಮಗಳಿಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ನೀಡಲಿದ್ದಾರೆ. ಶಾಲೆಗಳು, ಅಂಗನವಾಡಿಗಳಲ್ಲಿ ಅತಿಸಾರ ಭೇದಿ ತಡೆಯುವ ನಿಟ್ಟಿನಲ್ಲಿ ಪ್ರಾತ್ಯಕ್ಷಿಕೆ ಏರ್ಪಡಿಸಲಾಗುತ್ತದೆ. ಜಿಲ್ಲೆಯ ಪ್ರಾಥಮಿಕ, ಸಮುದಾಯ, ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಸೇರಿದಂತೆ 245 ಕಡೆಗಳಲ್ಲಿ ಓ.ಆರ್.ಎಸ್. ದ್ರಾವಣ ಹಾಗೂ ಝಿಂಕ್ ಮಾತ್ರೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. “ಶೌಚದ ನಂತರ, ಆಟವಾಡಿದ ನಂತರ, ಪ್ರಾಣಿಗಳನ್ನು ಮುಟ್ಟಿದ ನಂತರ, ಮಕ್ಕಳ ಶೌಚವನ್ನು ಶುಚಿಗೊಳಿಸಿದ ನಂತರ, ಅಡುಗೆ ಮಾಡುವ ಮೊದಲು, ಮಕ್ಕಳಿಗೆ ತಿನ್ನಿಸುವ ಮೊದಲು ಕೈಗಳನ್ನು ಕಡ್ಡಾಯವಾಗಿ ಸಾಬೂನಿನಿಂದ ಕೈ ತೊಳೆಯಬೇಕು ಎಂದು ತಿಳಿಸಿದರು.

ಓ.ಆರ್.ಎಸ್.ನ್ನು ಅತಿಸಾರ ಭೇದಿ ನಿಲ್ಲುವವರೆಗೆ ನೀಡುವ ಮೂಲಕ ನಿರ್ಜಲೀಕರಣವನ್ನು ದೂರವಾಗಿರಿಸಿ  ಝಿಂಕ್ ಮಾತ್ರೆಗಳನ್ನು 14 ದಿನಗಳವರೆಗೆ ಪ್ರತೀದಿನ 1 ರಂತೆ ನೀಡುವುದರಿಂದ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂರು ತಿಂಗಳ ತನಕ ಅತಿಸಾರ ಭೇದಿಯಿಂದ ಕಾಪಾಡುತ್ತದೆ” ಎಂದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಕಚೇರಿ ಬಳಿ ಅತಿಸಾರ ಭೇದಿ ತೀವ್ರ ನಿಯಂತ್ರಣ ಪಾಕ್ಷಿಕ ಅಭಿಯಾನದ ಜಾಥಾಗೆ ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ಚಾಲನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಕುಮಾರ್,  ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆಶಾ, ಕ್ಷಯರೋಗ ನಿಯಂತ್ರಣಾಧಿಕಾರಿ ಎ.ಸಿ.ಶಿವಕುಮಾರ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ, ಜಿಲ್ಲಾ ಆಸ್ಪತ್ರೆಯ ಸ್ವಾಮಿ, ಮಮತ, ದಿವಾಕರ, ಉಮೇಶ್, ಕಿರಣ್ ಇತರರು ಹಾಜರಿದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: