ಮೈಸೂರು

ಕಾವ್ಯ ನಿಂತ ನೀರಾಗದೆ ಹರಿಯುವ ಸರೋವರವಾಗಬೇಕು: ಸಿಪಿಕೆ

ಕಾವ್ಯ ನಿರಂತರವಾಗಿ ಹರಿಯುವ ಜೀವನದಿಯಾಗಿದ್ದು, ಒಂದೆಡೆ ನಿಲ್ಲದೆ, ನಿಂತ ನೀರಂತಾಗದೆ ಹರಿಯುವ ಸರೋವರದಂತಾಗಬೇಕು ಎಂದು ಹಿರಿಯ ಸಾಹಿತಿ ಸಿಪಿಕೆ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ನೆಲದನಿ ಸಾಂಸ್ಕೃತಿಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಗುರುವಾರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿರುವ ಜಿಲ್ಲಾ ಕಸಾಪ ಕಚೇರಿಯಲ್ಲಿ ಆಯೋಜಿಸಿದ್ದ ದಸರಾ ಕಾವ್ಯ ಕಾವೇರಿ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವ್ಯ ತಾವರದಂತಾಗದೆ ಜಂಗಮದಂತಾಗಬೇಕು. ಒಂದು ಉತ್ತಮ ಕಾವ್ಯಕ್ಕೆ ಸಮಾಜ ಕಟ್ಟುವ, ತಪ್ಪುಗಳನ್ನು ತಿದ್ದುವ ಶಕ್ತಿಯಿದ್ದು, ಕವಿಗಳು ಸಾಹಿತಿಗಳು ಉತ್ತಮ ಸಾಹಿತ್ಯ ರಚಿಸಬೇಕು. ಭಾಷೆ ಎಂಬುದು ಬೆಳಕಾಗಿದ್ದು, ಕಾವ್ಯ, ದಸರಾ ಎಂಬುದೂ ಬೆಳಕೇ. ಹಾಗಾಗಿ ಉತ್ತಮ ಕಾವ್ಯ ರಚಿಸುವ ಮೂಲಕ ಸಮಾಜಕ್ಕೆ ಬೆಳಕಾಗಬೇಕು. ಕಾವೇರಿಗೆ ಸಂಬಂಧಪಟ್ಟಂತೆ ಕವಿಗೋಷ್ಠಿ ಏರ್ಪಡಿಸಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.

ಕವಿಗಳು, ಸಾಹಿತಿಗಳು, ಚಿಂತಕರು ಸದಾ ಸಮಾಜಕ್ಕೆ ಒಳಿತಾಗುವ ಕಾರ್ಯಗಳನ್ನು ಮಾಡಲು ಮುಂದಾಗಬೇಕು. ಸಮಾಜಕ್ಕೆ ಕೆಡುಕನ್ನು ಬಯಸುವವನು ಸಾಕ್ಷಾತ್ ಮೃತ್ಯುಕೂಪದಂತೆ. ಇಂತಹವರು ತಾವೂ ಸುಟ್ಟು ಸಮಾಜವನ್ನು ಸುಟ್ಟು ಹಾಕುತ್ತಾರೆ. ಇದರಿಂದ ಇಡೀ ಸಾಹಿತ್ಯ ಕುಲಕ್ಕೆ ಕೆಟ್ಟ ಹೆಸರು ಸಿಗುತ್ತದೆ. ಹಾಗಾಗಿ ಸಮಾಜಕ್ಕೆ ಅಮೃತಪುರುಷರಾಗಿ ಸಮಾಜದ ಸರ್ವತೋಮುಖ ಪ್ರಗತಿಗೆ ಶ್ರಮಿಸುವವನೇ ನಿಜವಾದ ಕವಿ ಎಂದು ಪ್ರತಿಪಾದಿಸಿದರು.

ಕವಿಗೋಷ್ಠಿಯಲ್ಲಿ ಪ್ರಸ್ತುತ ರಾಜ್ಯವನ್ನು ಬಾಧಿಸುತ್ತಿರುವ ಕಾವೇರಿ ಜಲವಿವಾದದ ಬಗ್ಗೆ ಸುಮಾರು 2೦ಕ್ಕೂ ಹೆಚ್ಚು ಕವಿಗಳು ಕವಿತೆ ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಕವಯಿತ್ರಿ ಮೀನಾ ಪಾಟೀಲ್, ಡಾ.ಟಿ.ಸಿ.ಪೂರ್ಣಿಮಾ, ನೆಲದನಿ ಸಾಂಸ್ಕೃತಿಕ ಸಂಸ್ಥೆ ಕಾರ್ಯಾಧ್ಯಕ್ಷ ಸತೀಶ್ ಜವರೇಗೌಡ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

 

Leave a Reply

comments

Related Articles

error: