ಮೈಸೂರು

ಪ್ರೇಕ್ಷಕರನ್ನು ಸಂಗೀತ ಸುಧೆಯಲ್ಲಿ ಮುಳುಗೇಳಿಸಿದ ಆರಕ್ಷಕರು

ಸೋಕಿದರೆ ಸೀಳಿಹೋಗುವಂತೆ ನೀಟಾಗಿ ಇಸ್ತ್ರಿ ಮಾಡಿದ ಗರಿಗರಿಯಾದ ಸಮವಸ್ತ್ರ, ಕೈಯ್ಯಲೊಂದು ಲಾಠಿ, ಹೆಗಲಲ್ಲಿ ಇಳಿಬಿಟ್ಟ ಬಂದೂಕು. ವಾರದ ಏಳು ದಿನವೂ ಹಗಲು ರಾತ್ರಿಯೆನ್ನದೇ ಸಾರ್ವಜನಿಕರ ಸೇವೆ, ಪುಂಡಪೋಕರಿಗಳನ್ನು ಹಿಡಿಯೋದು, ಕಳ್ಳಕಾಕರು-ಕೊಲೆಗಡುಕರನ್ನು ಮಟ್ಟಹಾಕೋದು ಇವಿಷ್ಟೇ ಅವರ ಪ್ರಪಂಚ. ಅವರು ಕಲ್ಲು ಮನಸ್ಸಿನವರು, ಕಠಿಣ ಹೃದಯಿಗಳು ಅಂತ ಆರಕ್ಷಕರ ಕುರಿತು ನಮ್ಮ ನಮ್ಮೊಳಗೆ ಏನೇನೋ ಕಲ್ಪನೆಗಳು ಹುಟ್ಟಿಕೊಂಡು ಬಿಟ್ಟಿರುತ್ತವೆ. ಆದರೆ ಅವೆಲ್ಲ ಸುಳ್ಳು ಅವರಿಗೂ ಮನಸ್ಸಿದೆ. ಅವರಿಗೂ ಭಾವನೆಗಳಿವೆ. ಅವರ ಮನಸ್ಸು ಹೂವಿನಷ್ಟೇ ಕೋಮಲ. ಅವರ ಕೈ ಬೆರಳುಗಳೂ ಸಂಗೀತ ಪರಿಕರಗಳ ಮೇಲೆ ತನ್ನ ನಾಟ್ಯಗಳನ್ನಾಡಬಲ್ಲವು ಎಂಬ ವಿಷಯದ ಅರಿವಾಗಿದ್ದು ಗುರುವಾರ ಸಾಯಂಕಾಲ ಅರಮನೆ ಆವರಣದಲ್ಲಿ ನಡೆದ ಪೊಲೀಸ್ ಸಮೂಹ ವಾದ್ಯಗೋಷ್ಠಿಯಲ್ಲಿ.

ಸೂರ್ಯಾಸ್ತಮಾನದ ವೇಳೆ ಅರಮನೆ ಆವರಣದಲ್ಲಿ ದಸರಾ ಉತ್ಸವ ಪ್ರಯುಕ್ತ ನಡೆದ ಪೊಲೀಸ್ ಸಮೂಹ ವಾದ್ಯಗೋಷ್ಠಿ ಪ್ರೇಕ್ಷಕರನ್ನು ಸಂಗೀತ ಲೋಕಕ್ಕೆ ಕೊಂಡೊಯ್ಯಿತು. ಇಂಗ್ಲೀಷ್ ಮತ್ತು ಕರ್ನಾಟಕ ಶಾಸ್ತ್ರೀಯ 2 ವಿಭಾಗಗಳಲ್ಲಿ ನಡೆದ ವಾದ್ಯಗೋಷ್ಠಿ ಅಮೋಘವಾಗಿ ಮೂಡಿಬಂತು.

ಗೃಹಸಚಿವ ಡಾ.ಜಿ.ಪರಮೇಶ್ವರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಜನರಲ್ ಸೆಲ್ಯೂಟ್ ನ ರಾಯಲ್ ಫ್ಯಾನ್ ಫೇರ್ ಗೀತೆಯ ಮೂಲಕ ಗೌರವ ವಂದನೆ ಸ್ವೀಕರಿಸಿದರು. ಬಳಿಕ ವಾದ್ಯಗೋಷ್ಠಿ ತಂಡದ ಮುಖ್ಯಸ್ಥ ಆಲ್ ಫ್ರೆಡ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಜಲ್ ಪಕ್ಷಿ ಕೃತಿ ಸೊಗಸಾಗಿ ಮೂಡಿಬಂತು.

ನಂತರ ನಡೆದ ಉಭಯ ವಾದ್ಯ ವೃಂದಗಳ ಜುಗಲ್ ಬಂದಿ ಕಾರ್ಯಕ್ರಮ ಪ್ರೇಕ್ಷಕರನ್ನು ಸಂಗೀತ ಸುಧೆಯಲ್ಲಿ ಮುಳುಗೇಳಿಸಿತು. ವಾದ್ಯಮೇಳದಲ್ಲಿ ಮೂರು ವಿಭಾಗಗಳಲ್ಲಿ ಬಹುಮಾನವನ್ನು ವಿತರಿಸಲಾಗಿದ್ದು, ಬೃಹತ್ ವಾದ್ಯಗೋಷ್ಠಿಯಲ್ಲಿ ಮೈಸೂರಿನ ಕೆ.ಎಸ್.ಆರ್.ಪಿ.5ನೇಪಡೆ ಪ್ರಥಮ ಸ್ಥಾನವನ್ನೂ, ಮಂಗಳೂರಿನ ಕೆ.ಎಸ್.ಆರ್.ಪಿ 7ನೇ ಪಡೆ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿವೆ. ಮಧ್ಯಮ ವಾದ್ಯಗೋಷ್ಠಿಯಲ್ಲಿ ಕಾರವಾರದ ಡಿಎಆರ್ ಪ್ರಥಮ ಸ್ಥಾನವನ್ನೂ, ಉಡುಪಿಯ ಡಿಎಆರ್ ದ್ವಿತೀಯ ಸ್ಥಾನವನ್ನೂ ತಮ್ಮದಾಗಿಸಿಕೊಂಡಿವೆ. ಬೆಂಗಳೂರಿನ ಕೆ.ಎಸ್.ಆರ್.ಪಿ 1ನೇ ಪಡೆಗೆ ಪೈಪ್ ಬ್ಯಾಂಡ್ ನಲ್ಲಿ ಪ್ರಥಮ ಸ್ಥಾನ ಲಭಿಸಿದೆ.

ವಿಶೇಷ ಬಹುಮಾನ ವಿಭಾಗದಲ್ಲಿ  ಇಂಗ್ಲೀಷ್ ವಾದ್ಯವೃಂದ ಪ್ರಥಮ, ಕರ್ನಾಟಕ ವಾದ್ಯವೃಂದ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿವೆ. ಪ್ರಥಮ ಸ್ಥಾನಗಳಿಸಿದ ಎಲ್ಲ ತಂಡಗಳಿಗೆ 5ಸಾವಿರ ರೂ.,ದ್ವಿತೀಯ ಸ್ಥಾನಗಳಿಸಿದ ಎಲ್ಲ ತಂಡಗಳಿಗೆ 3ಸಾವಿರ ರೂ.ನಗದು ಬಹುಮಾನವನ್ನು ಪೊಲೀಸ್ ಆಯುಕ್ತ ಬಿ.ದಯಾನಂದ ವಿತರಿಸಿದರು.

Leave a Reply

comments

Related Articles

error: