ಮೈಸೂರು

ಪ್ರೇಕ್ಷಕರ ಮನಸೂರೆಗೊಂಡ ‘ಮೋಹಿನಿ ಭಸ್ಮಾಸುರ’ ನೃತ್ಯರೂಪಕ

s1020002ಮೈಸೂರು ದಸರಾ ಸಾಂಸ್ಕೃತಿ ಉತ್ಸವದ ಐದನೇ ದಿನದಂದು ಜಗನ್ಮೋಹನ ಅರಮನೆ ವೇದಿಕೆಯಲ್ಲಿ ಗುರುವಾರ ಸಂಜೆ ಸುಗಮ ಸಂಗೀತ, ಡೊಳ್ಳು ಕುಣಿತ, ನೃತ್ಯ ಕಾರ್ಯಕ್ರಮಗಳು ನಡೆದವು.

ರಾಜ್ಯದ ಜಾನಪದ ಕಲೆಯ ಅಗ್ರ ಪಂಥಿಯಲ್ಲಿರುವ ಡೊಳ್ಳು ಕುಣಿತವನ್ನು ಬಳ್ಳಾರಿ ಜಿಲ್ಲೆಯ ಸೊನ್ನ ಗ್ರಾಮದ ಶ್ರೀ ಬೀರಲಿಂಗೇಶ್ವರ ಡೊಳ್ಳಿನ ಸಂಘದ ಸದಸ್ಯರು ನಡೆಸಿಕೊಟ್ಟರು. ಗಂಡು ಕಲೆ ಡೊಳ್ಳು ಕುಣಿತದಲ್ಲಿ ಬೀರೇಶ್ವರ ಸ್ವಾಮಿಯನ್ನು ಹಾಡಿಹೊಗಳಿ ಭಕ್ತಿ ಸಮರ್ಪಿಸಿದರು.

ಮೈಸೂರಿನ ಇಂದ್ರಾಣಿ ಅನಂತರಾಮ್ ಮತ್ತು ತಂಡದವರ ಸುಗಮ ಸಂಗೀತ ಕಾರ್ಯಕ್ರಮ ತುಂಬಾ ಸುಂದರವಾಗಿ ಮೂಡಿಬಂತು. ಅವರಿಗೆ ಪಕ್ಕವಾದ್ಯದಲ್ಲಿ ಮಾಡೋಲಿನ್ ವಿದ್ವಾನ್ ಆನಂದ್, ತಬಲ ವಿದ್ವಾನ್ ಇಂದೂಶೇಖರ್ ಮತ್ತು ರಿದಂ ವಿದ್ವಾನ್ ಶ್ರೀನಿವಾಸ್ ಸಾಥ್ ನೀಡಿದರು.

ಯೋಗ ಗುರು ವಿಜಯಲಕ್ಷ್ಮಿ ಹೋಟಾ ಅವರ ಪುತ್ರಿ ರೀಲಾ ಹೋಟಾ ಅವರು ಯೋಗ ಕುಂಡಲಿನಿ ಹಾಗೂ ಚಕ್ರ ಜಾಗೃತ ‘ ಜಾಗೋ ಮಾ ಕುಂಡಲಿನಿ’ ನೃತ್ಯವನ್ನು ಮನಮೋಹಕವಾಗಿ ಪ್ರದರ್ಶಸಿದರು. ಸಮುದ್ರದ ಶಾಂತ ಅಲೆಯಂತೆ ತೇಲಿಬಂದ ಕುಂಡಲಿನಿ ಶಕ್ತಿ ಜಾಗೃತ ನೃತ್ಯದ ಹಿನ್ನೆಲೆ ಸಂಗೀತವು ವೀಕ್ಷಕರಿಗೆ ಕುಂಡಲಿನಿ ಶಕ್ತಿ ಜಾಗೃತವಾದಂತಹ ಅನುಭವ ಮೂಡಿಸಿತು. ಪತಂಜಲಿ ಋಷಿಮುನಿಗಳ ಅಷ್ಟಾಂಗ ಯೋಗದ ಮೂಲಕ ಮೋಕ್ಷದೆಡೆಗೆ ನೃತ್ಯವು ಪ್ರೇಕ್ಷಕನನ್ನು ಆಧ್ಯಾತ್ಮಿಕ ಲೋಕಕ್ಕೆ ಕರೆದೊಯ್ಯಿತು.

s1020001ಧಾರವಾಡದ ಸೀತಾ ಚಪ್ಪರ ಮತ್ತು ತಂಡದವರ ‘ಮೋಹಿನಿ ಭಸ್ಮಾಸುರ’ ನೃತ್ಯರೂಪಕಕ್ಕೆ ಶಿಳ್ಳೆ ಚಪ್ಪಾಳೆಗಳ ಮಹಾಪೂರವೇ ಹರಿದು ಬಂತು. ದಸರಾ ಉಪಸಮಿತಿ ವಿಶೇಷಾಧಿಕಾರಿ ಎಂ.ಎಸ್.ಲೋಕೇಶ್ ಕಲಾವಿದರನ್ನು ಸನ್ಮಾನಿಸಿದರು. ಓಹಿಲಾ ನಿರೂಪಿಸಿದರು.

 

Leave a Reply

comments

Related Articles

error: