ಮೈಸೂರು

ದಲ್ಲಾಳಿಗಳ ಹಾವಳಿ ನಿಲ್ಲಿಸಿ, ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ: ರೈತರ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ

ಮೈಸೂರು, ಜೂ.೧೩: ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿ ನಿಲ್ಲಿಸಿ, ರೈತರಿಗೆ ಸಾಲ ಕೊಡಿ, ಸಾಲ ವಸೂಲಿ ಮಾಡುವುದನ್ನು ನಿಲ್ಲಿಸಿ, ಸಬ್ಸಿಡಿ ನೀಡಿ, ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ ರೈತರ ಆತ್ಮಹತ್ಯೆ ತಡೆಯಿರಿ.
ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ರೈತರ ಸಭೆಯಲ್ಲಿ ಕೇಳಿಬಂದ ಸಮಸ್ಯೆಗಳ ಸುರಿಮಳೆಯೊಂದಿಗೆ, ರೈತರ ಒಕ್ಕೊರಲಿನ ಒತ್ತಾಯಗಳಿವು. ಕಳೆದ ವರ್ಷ ನೀರಿಲ್ಲದೆ ಬೆಳೆದ ಭತ್ತ, ಕಬ್ಬು ನಷ್ಟವಾಗಿದೆ. ಈ ಬಗ್ಗೆ ಸರ್ಕಾರ ಹಾಗೂ ಬ್ಯಾಂಕುಗಳಿಗೂ ಮನದಟ್ಟಾಗಿದೆ. ಅದರಲ್ಲೂ ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಾತಿ ಮಾಡುತ್ತಿರುವುದನ್ನು ನಿಲ್ಲಿಸಬೇಕಿದೆ. ಮಾಡಿದ ಸಾಲವನ್ನು ರೈತರು ತೀರಿಸಿಯೇ ತೀರಿಸುತ್ತಾರೆ. ಆ ಬಗ್ಗೆ ಭಯ ಬೇಡ. ಬ್ಯಾಂಕ್ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.
ಕಿವಿ ಮೂಗು ಕಣ್ಣು ಇಲ್ಲದ ಸರ್ಕಾರ ತರಕಾರಿ, ಕಬ್ಬಿಗೆ ಕನಿಷ್ಟ ದರ ನಿಗದಿ ಮಾಡಬೇಕು. ಸಿರಿಧಾನ್ಯ ಬೆಳೆಯವವರು ಮಾತ್ರ ಆತ್ಮ ಹತ್ಯೆ ಮಾಡಿಕೊಂಡಿಲ್ಲ. ೧೧ ಮಂದಿ ತಂಬಾಕು ಬೆಳೆಗಾರರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರವಾನಗಿ ಬಾಂಡ್ ಹಿಂತುರಿಗಿಸಿದರೆ ಪರ್ಯಾಯ ಬೆಳೆ ಬೆಳೆಯುತ್ತೇವೆ. ರೈತರ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಹಕರಿಸಿ, ಸುಲಭ ಸಾಲ ಸೌಭಾಗ್ಯ ಸಿಗುವಂತೆ ಮಾಡಬೇಕು. ಶೇ.೪೦ರಷ್ಟು ತಂಬಾಕು ಬೆಳೆಗಾರರ ಸಾಲವಿದೆ. ಹುಣಸೂರಿನಲ್ಲಿ ತಂಬಾಕು ಬೆಳೆಯಲು ಮಿಷನ್ ನೀಡಿದ್ದಾರೆ. ಸರ್ಕಾರ ಮಗುವನ್ನು ಚಿವುಟಿ ಹಾಲು ಕುಡಿಸುವ ಕೆಲಸ ಮಾಡುತ್ತಿದೆ. ತಂಬಾಕು ಹಾನಿಕಾರಕ ಎಂದು ಗೊತ್ತಿದ್ದರೂ ಪ್ರೋತ್ಸಾಹ ನೀಡಿ, ಇತ್ತ ರೈತರಿಗೆ ಸರಿಯಾಗಿ ಅನುಕೂಲ ಕಲ್ಪಿಸದೆ ತಂಬಾಕು ರೈತರೊಂದಿಗೆ ಚೆಲ್ಲಾಟವಾಗುತ್ತಿದೆ ಎಂದು ಕಿಡಿ ಕಾರಿದ ರೈತರು, ಬೆಳೆಗಳಿಗೆ ಬೆಂಬಲ ಬೆಲೆ ನೀಡಿ. ಎಪಿಎಂಪಿ ಮಾರುಕಟ್ಟೆಗಳಲ್ಲಿ ಬೆಲೆ ನಿಗದಿ ಮಾಡಿರುವ ಬೋರ್ಡ್ ಹಾಕಿಲ್ಲ. ಅಲ್ಲದೆ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು ಮೊದಲು ಅದನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಹೆಚ್ಚುವರಿ ಎಸ್ಪಿ ಕಲಾ ಕೃಷ್ಣಸ್ವಾಮಿ, ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: