ಕರ್ನಾಟಕಪ್ರಮುಖ ಸುದ್ದಿ

ಚಾಮರಾಜನಗರ ಜಿಲ್ಲೆಯ ನೀರು ಕಸಿಯಲು ತಮಿಳುನಾಡು ತಯಾರಿ ; ಕಣ್ಮುಚ್ಚಿ ಕುಳಿತ ರಾಜ್ಯ ಸರ್ಕಾರ

ಬೆಂಗಳೂರು, ಜೂನ್ 13 : ಚಾಮರಾಜನಗರದ ರೈತರಿಗೆ ಆತಂಕ ತರಬಹುದಾದ ಕೆಲಸಕ್ಕೆ ತಮಿಳುನಾಡು ಮುಂದಾಗಿದೆ. ಸದಾ ಕಾವೇರಿ ನೀರಿಗಾಗಿ ಜಗಳ ತೆಗೆಯುವ ತಮಿಳುನಾಡು, ಹೊಸ ಯೋಜನೆಯೊಂದಕ್ಕೆ ಕೈ ಹಾಕಿದ್ದು ಇದು ಜಾರಿಯಾದರೆ ಚಾಮರಾಜನಗರದ ರೈತರು ಸಂಕಷ್ಟ ಅನುಭವಿಸಬೇಕಾಗುತ್ತದೆ.

ತಮಿಳುನಾಡಿನಲ್ಲಿ ಉತ್ತಮ ಮಳೆಯಾದರೆ ಒಂದಷ್ಟು ನೀರು ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಕ್ಕೆ ಹರಿದು ಬರುತ್ತದೆ ಆದರೆ ಅಲ್ಲಿನ ಸರ್ಕಾರ ಈಗ ಕರ್ನಾಟಕಕ್ಕೆ ಹರಿದು ಬರುವ ನೀರನ್ನು ತಡೆಯುವ ಸಲುವಾಗಿ ಅಲ್ಲಿಯೇ ಡ್ಯಾಂ ನಿರ್ಮಿಸಲು ಮುಂದಾಗಿದೆ. ಇದು ಚಾಮರಾಜನಗರ ಜಿಲ್ಲೆಯ ರೈತರಿಗೆ ಮಾರಕವಾಗಲಿದೆ. ತಮಿಳುನಾಡು ನೀರನ್ನು ತಡೆದರೆ ಜಿಲ್ಲೆಯ ರೈತರು ಮತ್ತು ಜನ-ಜಾನುವಾರುಗಳು ನೀರಿಲ್ಲದೆ ಪರಿತಪಿಸಬೇಕಾಗುತ್ತದೆ.

ಚಾಮರಾಜನಗರದಲ್ಲಿ ಸುವರ್ಣಾವತಿ ಮತ್ತು ಚಿಕ್ಕಹೊಳೆ ಎಂಬ ಎರಡು ಜಲಾಶಯಗಳಿದ್ದು, ಈ ಜಲಾಶಯಗಳಿಗೆ ಒಂದಷ್ಟು ನೀರು ತಮಿಳುನಾಡಿನಿಂದ ಹರಿದು ಬರುತ್ತದೆ. ಈ ನೀರಿಗೆ ತಡೆಯೊಡ್ಡುವ ಮೂಲಕ ತಮಿಳುನಾಡು ತನ್ನ ಹಿತ ಸಾಧಿಸಲು ಮುಂದಾಗಿದೆ ಆದರೆ ಇದರಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ.

ತಮಿಳುನಾಡಿನ ದಿಂಬಂ ಮತ್ತು ಸತ್ಯಮಂಗಲ ಕಾಡು-ಬೆಟ್ಟಗಳಲ್ಲಿ ಮಳೆ ಸುರಿದರೆ ಆ ನೀರು ಚಾಮರಾಜನಗರದ ಅವಳಿ ಜಲಾಶಯಗಳಿಗೆ ಹರಿದು ಬರುತ್ತದೆ. ಈ ಜಲಾಶಯ ಭರ್ತಿಯಾದರೆ ಸುಮಾರು ಎರಡು ಲಕ್ಷ ಜನರ ಬದುಕು ಸಾಗುತ್ತದೆ. ಇದನ್ನು ಮನಗಂಡ ತಮಿಳುನಾಡು ಈ ನೀರಿಗೂ ತಡೆಯೊಡ್ಡುವ ಪ್ರಯತ್ನ ಮಾಡಿದೆ.

ಬೆಟ್ಟಗುಡ್ಡದಿಂದ ಹರಿದು ಬರುವ ನೀರನ್ನು ತಡೆಹಿಡಿಯುವ ಯೋಜನೆಗೆ ಕೈಹಾಕಿದ್ದು, ಈರೋಡು ಜಿಲ್ಲೆಯ ತಾಳವಾಡಿ ತಾಲೂಕಿನಲ್ಲಿ ಚಿಕ್ಕಹಳ್ಳಿ ಜಲಾಶಯದ ಬಳಿ ಡ್ಯಾಂ ನಿರ್ಮಾಣಕ್ಕೆ ಮುಂದಾಗಿದೆ. ಅಷ್ಟೇ ಅಲ್ಲ, ಜಮೀನುಗಳ ಬಳಿ, ಹಳ್ಳ-ಕೊಳ್ಳದ ನೀರಿಗೂ ಚೆಕ್ ಡ್ಯಾಂ ನಿರ್ಮಿಸಿ ಸಂಪೂರ್ಣವಾಗಿ ನೀರು ಹಿಡಿದಿಡುವ ಕಾರ್ಯಕ್ಕೂ ಮುಂದಾಗಿದೆ.

ಈಗಲೇ ಚಾಮರಾಜನಗರದ ರೈತರು ನೀರಿಲ್ಲದೆ ಕಂಗಾಲಾಗಿದ್ದಾರೆ. ಈಗೇನಾದರು ತಮಿಳುನಾಡು ಸರ್ಕಾರದ ಯೋಜನೆಗಳು ಕಾರ್ಯರೂಪಕ್ಕೆ ಬಂದು ಡ್ಯಾಂ, ಚೆಕ್ ಡ್ಯಾಂಗಳು ನಿರ್ಮಾಣವಾದರೆ ಬೆಟ್ಟಗುಡ್ಡಗಳ ಪ್ರದೇಶದಿಂದ ನೀರು ಹರಿದು ಬರುವುದು ಸಂಶಯ.

ಹೀಗಾಗಿ ಈ ಭಾಗದ ರೈತರು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಆದರೆ, ಈ ಬಗ್ಗೆ ಗಮನವಹಿಸಿ ಸೂಕ್ತ ಸಮಯದಲ್ಲಿ ಆಕ್ಷೇಪ ಸಲ್ಲಿಸುವ ಮೂಲಕ ರಾಜ್ಯದ ಜನರ ಹಿತ ಕಾಯಬೇಕಿದ್ದ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ.

-ಎನ್.ಬಿ.ಎನ್.

Leave a Reply

comments

Related Articles

error: