ಪ್ರಮುಖ ಸುದ್ದಿಮೈಸೂರು

ಆಯುಕ್ತ ದಯಾನಂದ್ ಜಾಗಕ್ಕೆ ಐಜಿಪಿ ಸಿಐಡಿ ಶರತ್ ಚಂದ್ರ ?

ಐತಿಹಾಸಿಕ ದಸರಾ ಉತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯ ದಿನಗಣನೆ ಆರಂಭವಾಗಿದೆ. ಆದರೆ ಇದೇ ಸಮಯದಲ್ಲಿ ನಗರ ಆಯುಕ್ತ ಹಾಗೂ ದಸರಾ ಉಪ ಸಮಿತಿಯ ವಿಶೇಷಾಧಿಕಾರಿ ಬಿ.ದಯಾನಂದ್ ರಾಜ್ಯ ಗುಪ್ತದಳ ವಿಭಾಗಕ್ಕೆ ಐಜಿಪಿಯಾಗಿ ವರ್ಗಾವಣೆಗೊಂಡಿದ್ದು ಸಾರ್ವಜನಿಕ ವಲಯದಲ್ಲಿ ಗೊಂದಲ ಮೂಡಿಸಿದೆ.

ದಯಾನಂದ್ ಅವರ ಜಾಗಕ್ಕೆ ಬೆಂಗಳೂರಿನ ಐಜಿಪಿ ಸಿಐಡಿ ಶರತ್ ಚಂದ್ರ ಹೆಸರು ಕೇಳಿ ಬಂದಿದೆ.  ಆದರೆ ದಯಾನಂದ್ ಅವರು ಜಂಬೂ ಸವಾರಿಯನ್ನು ಪೂರ್ಣಗೊಳಿಸಿ ಬೆಂಗಳೂರಿಗೆ ನಿರ್ಗಮಿಸಲಿದ್ದಾರೋ ಅಥವಾ ಈಗಲೇ ನಿರ್ಗಮಿಸಲಿದ್ದಾರೋ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ನಗರ ಆಯುಕ್ತರ ಸ್ಥಾನಕ್ಕೆ ಸರ್ಕಾರ ಐಜಿ ಶರತ್ ಚಂದ್ರ ಹೆಸರನ್ನು ಸೂಚಿಸಿದೆ ಎನ್ನಲಾಗಿದೆ. ಡಾ.ಎಂ.ಎ.ಸಲೀಂ ವರ್ಗಾವಣೆಯ ನಂತರ ಏಪ್ರೀಲ್ 29, 2015ರಂದು ಬಿ.ದಯಾನಂದ್ ಮೈಸೂರು ನಗರ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು.

ಅಧಿಕಾರ ಸ್ವೀಕರಿಸಿದ ಬಳಿಕ ಆರ್.ಎಸ್.ಎಸ್.ಕಾರ್ಯಕರ್ತ  ರಾಜು ಹತ್ಯೆಯ ಪ್ರಕರಣವನ್ನು ಭೇದಿಸಿ ಹತ್ಯೆಯಲ್ಲಿ ಭಾಗಿಯಾದ 9ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ರಾಜು ಹತ್ಯೆ ಪ್ರಕರಣದ ಆರೋಪಿಗಳು ಬಂಧನಕ್ಕೊಳಗಾಗುತ್ತಿದ್ದಂತೆ ಅವರು ರಾಜ್ಯದ ವಿವಿಧೆಡೆ ನಡೆಸಿದ್ದ 8 ಪ್ರಕರಣಗಳು ಬೆಳಕಿಗೆ ಬಂದಿದ್ದು ಅವುಗಳನ್ನು ಭೇದಿಸುವಲ್ಲಿಯೂ ಮಹತ್ತರ ಪಾತ್ರ ವಹಿಸಿದ್ದರು.

ಸಂಚಾರ ವಿಭಾಗಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ದರು. ನಗರದಲ್ಲಿ ಹೆಚ್ಚಿನ ಸಿಸಿ ಟಿವಿ ಅಳವಡಿಕೆ , ಆಟೋಮೇಶನ್ ಸೆಂಟರ್ ಉನ್ನತೀಕರಣ ಜೊತೆ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದರು.

ದಸರಾ ಸಿದ್ಧತೆಯ ಕುರಿತಂತೆಯೂ ಹೆಚ್ಚಿನ ಜಾಗ್ರತೆ ವಹಿಸಿದ್ದು, ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಗಾಗಿ ವಿಶೇಷ ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅವರ ನಿರ್ದೇಶನದಂತೆ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Leave a Reply

comments

Related Articles

error: