ದೇಶಪ್ರಮುಖ ಸುದ್ದಿ

ಎಚ್‍ಡಿಕೆ ವಿರುದ್ಧದ ಜಂತಕಲ್ ಪ್ರಕರಣ : ಎಸ್‌ಐಟಿಗೆ ಸಾಕ್ಷಿ ನೀಡಿದ್ದೇನೆ ಎಂದ ಜನಾರ್ದನ ರೆಡ್ಡಿ

ಬೆಂಗಳೂರು, ಜೂನ್ 13 : ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಅವರ ಸರ್ಕಾರವನ್ನೇ ಅಲುಗಾಡಿಸಿದ್ದ ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನೀಡಲು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಇಂದು ವಿಶೇಷ ತನಿಖಾ ತಂಡ -ಎಸ್‌ಐಟಿ ಮುಂದೆ ಹಾಜರಾದರು.

ಮೂರು ವಾರಗಳ ಹಿಂದೆ ವಿಶೇಷ ನ್ಯಾಯಾಲಯಕ್ಕೆ ಮೊದಲ ಬಾರಿಗೆ ಹಾಜರಾದ ಜನಾರ್ದನ ರೆಡ್ಡಿ ಅವರು ಸಾಕ್ಷ್ಯ ಕಲೆ ಹಾಕಲು ತಮಗೆ ಸಮಯ ಬೇಕು ಎಂದು ಕೇಳಿಕೊಂಡಿದ್ದರು. ಮೂರು ವಾರಗಳ ನಂತರ ಇಂದು ಮತ್ತೆ ವಿಚಾರಣೆಗೆ ಹಾಜರಾದ ಜನಾರ್ದನ ರೆಡ್ಡಿ ಅವರು, ಸುದೀರ್ಘ 3 ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವಿಶೇಷ ನ್ಯಾಯಾಲಯಕ್ಕೆ ನನ್ನ ಬಳಿ ಇದ್ದ ಎಲ್ಲ ಸಾಕ್ಷ್ಯ ನೀಡಿದ್ದೇನೆ ಎಂದು ಜನಾರ್ದನ ರೆಡ್ಡಿ ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಪೆನ್‍ಡ್ರೈವ್ ಎಲ್ಲವನ್ನೂ ನಾನು ವಿಶೇಷ ನ್ಯಾಯಾಲಕ್ಕೆ ನೀಡಿದ್ದೇನೆ. ನಾನು ಕಳೆದ 10 ವರ್ಷಗಳಿಂದ ಸಾಕ್ಷ್ಯಗಳನ್ನು ಕಾಪಾಡಿಕೊಂಡು ಬಂದಿದ್ದೇನೆ. ನನ್ನ ಆರೋಪಕ್ಕೆ ಪೂರಕವಾದ ಎಲ್ಲಾ ರೀತಿಯ ದಾಖಲೆ, ವಿಡಿಯೋ ಸೀಡಿ ಹಾಗೂ ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನು ಎಸ್ ಐಟಿ ಅಧಿಕಾರಿಗಳಿಗೆ ನೀಡಿದ್ದೇನೆ. ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ ತನಿಖೆಯ ಕುರಿತು ಹೆಚ್ಚಿನ ಮಾಹಿತಿ ನೀಡುವ ಅಗತ್ಯವಿಲ್ಲ ಎಂದರು.

2007 ರಲ್ಲಿ ಸರ್ಕಾರವನ್ನೇ ಅಲುಗಾಡಿಸಿದ್ದ ಪ್ರಕರಣ :

ಅಕ್ರಮ ಗಣಿಗಾರಿಕೆ ನಡೆಸಲು ಸಹಕರಿಸಿದ್ದಕ್ಕೆ ಪ್ರತಿಯಾಗಿ ಜಂತಕಲ್ ಮೈನಿಂಗ್ ಕಂಪೆನಿಯಿಂದ ಕುಮಾರಸ್ವಾಮಿ ಅವರು 150 ಕೋಟಿ ಲಂಚ ಪಡೆದಿದ್ದಾರೆ ಎಂದು 2007 ರಲ್ಲಿ ಜನಾರ್ದನ ರೆಡ್ಡಿ ಆರೋಪಿಸಿದ್ದರು.

ತಮ್ಮ ಬಳಿ ಕಪ್ಪ ಕಾಣಿಕೆ ಪಡೆದ ಬಗ್ಗೆ ವಿಡಿಯೋ ಸಿ.ಡಿ ಇದೆ ಎಂದು ಅಂದು ಬಿಜೆಪಿ ಶಾಸಕರಾಗಿದ್ದ ಜನಾರ್ದನ ರೆಡ್ಡಿ ವಿಧಾನಸಭೆಯಲ್ಲೇ ಆರೋಪಿಸಿದ್ದರು. ಈ ಆರೋಪದಿಂದಾಗಿ ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರ ಸರ್ಕಾರವೇ ಅಲುಗಾಡುವ ಪರಿಸ್ಥಿತಿ ಉಂಟಾಗಿತ್ತು.

ಅಂದು ಜೆಡಿಎಸ್-ಬಿಜೆಪಿ ದೋಸ್ತಿ ಸರ್ಕಾರವಿದ್ದ ಕಾರಣ ಮತ್ತು ದೇವೇಗೌಡ ರಂಗಪ್ರವೇಶದಿಂದ ಈ ಪ್ರಕರಣ ಅಲ್ಲಿಗೇ ತಣ್ಣಗಾಗಿತ್ತು.

ಆದರೆ ಇದೀಗ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಈ ಪ್ರಕರಣದ ವಿಚಾರಣೆಗೆ ಮರು ಚಾಲನೆ ನೀಡಿದೆ.  ಅಂದಿನಿಂದ ಇಂದಿನವರೆಗೂ ಹಲವು ಏರಿಳಿತಗಳನ್ನು ಕಂಡಿರುವ ಈ ಪ್ರಕರಣ ಇದೀಗ ನಿರ್ಣಾಯಕ ಹಂತಕ್ಕೆ ತಲುಪಿದೆ.

-ಎನ್.ಬಿ.ಎನ್.

Leave a Reply

comments

Related Articles

error: