ಮೈಸೂರು

ತಿಲಕ ನಗರದ ಮನೆಯಲ್ಲಿ ಅಡುಗೆ ಅನಿಲ ಸ್ಫೋಟ: ಭಾರಿ ಅನಾಹುತ

ಕಳೆದ ರಾತ್ರಿ ಮೈಸೂರಿನ ತಿಲಕ ನಗರದ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಭಾರೀ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ನಾಲ್ಕು ಮನೆಗಳ ಮೇಲ್ಛಾವಣಿ ಜಖಂ ಆಗಿ ಮಹಿಳೆ ಸೇರಿ ಇಬ್ಬರಿಗೆ ತೀವ್ರ ಸ್ವರೂಪದ ಗಾಯಗಳಾಗಿರುವುದು ವರದಿಯಾಗಿದೆ.

ತಿಲಕ ನಗರದ 6ನೇ ಕ್ರಾಸ್‍ ನ ಕುಮಾರ್ ಎಂಬುವವರ ಮನೆಯಲ್ಲಿ ಗ್ಯಾಸ್ ಸ್ಫೋಟವಾಗಿ ನೆರೆ ಮನೆಯ ತೊಳಸಮ್ಮ, ರಂಗಸ್ವಾಮಿ ಎಂ.ಬಿ. ಮತ್ತು ಜಗದೀಶ್ ಅವರ ಮನೆಗಳಿಗೂ ಹಾನಿಯಾಗಿದೆ. ಕುಮಾರ್ ಅವರ ಪುತ್ರ 26 ವರ್ಷದ ದಿಲೀಪ್ ಮತ್ತು ಎದುರು ಮನೆಯ 55 ವರ್ಷದ ತೊಳಸಮ್ಮ ಇವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆಯಲ್ಲಿ ಒಟ್ಟು ನಾಲ್ಕು ಸಿಲಿಂಡರ್ ಗಳಿದ್ದು ಒಂದರ ಅನಿಲವೂ ಸಂರ್ಪೂಣ ಸೋರಿಕೆಯಾಗಿದ್ದೇ ಸ್ಫೋಟಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಬನ್ನಿ ಮಂಟಪದ ಅಗ್ನಿಶಾಮಕ ದಳದ ಸಿಬ್ಬಂದಿಯ ಸಮಯೋಚಿತ ಕ್ರಮದಿಂದ ಭಾರಿ ಅನಾಹುತ ತಪ್ಪಿದೆ.

ಸ್ಥಳಕ್ಕೆ ಶಾಸಕ ವಾಸು ನಗರಪಾಲಿಕೆ ಆಯುಕ್ತ ಜಗದೀಶ್, ಸದಸ್ಯ ಸುಹೇಲ್ ಬೇಗ್, ಮೈಸೂರು ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಡಿ.ಸಿ.ಪಿ ಡಾ.ಹೆಚ್.ಟಿ.ಶೇಖರ್, ಎಸಿಪಿ ಉಮೇಶ್ ಜಿ.ಸೇಠ್, ಮಂಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಮತ್ತು ಸಿಬ್ಬಂದಿ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿವರ : ಸುಣ್ಣದ ಕೇರಿಯ ಸಂಬಂಧಿಕರ ಮನೆಗೆ ತೆರಳಿದ ಕುಮಾರ್ ಮನೆಗೆ ಮರಳಿದ ನಂತರ ಗ್ಯಾಸ್ ಸೋರಿಕೆ ಬಗ್ಗೆ ಅನುಮಾನ ಬಂದಿದೆ. ಲೈಟ್ ಸ್ವಿಚ್ ಹಾಕಿದಾಕ್ಷಣವೇ ತೀವ್ರ ಸ್ಫೋಟವಾಗಿದೆ. ಈ ಸಂದರ್ಭದಲ್ಲಿ ದಿಲೀಪನಿಗೆ ಸುಟ್ಟಗಾಯಗಳಾಗಿವೆ. ಸ್ಫೋಟದ ತೀವ್ರತೆಗೆ ಮನೆಯ ಬಾಗಿಲು ಕಿತ್ತು ಬಂದಿದ್ದು ಎದುರಿನಲ್ಲಿ ನೀರು ಹಿಡಿಯುತ್ತಿದ್ದ ತೊಳಸಮ್ಮನಿಗೆ ಬಡಿದು ಗಂಭೀಋ ಗಾಯವಾಗಿದೆ. ಇವರನ್ನು ಚಿಕಿತ್ಸೆಗೆಂದು ಮಿಷನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಫೋಟದಿಂದಾಗಿ ಮನೆಯ ಗೋಡೆ ಕುಸಿದು ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಮೇಲ್ಚಾವಣಿಯೂ ಸಂರ್ಪೂಣ ಹಾನಿಯಾಗಿದೆ. ನೆರೆಯ ಜಗದೀಶ್ ಮನೆಯ ಗೋಡೆ ಬಿರುಕು ಬಿಟ್ಟಿದೆ. ರಂಗಸ್ವಾಮಿ ಅವರ ಮನೆಯ ಬಾಗಿಲು ಮತ್ತು ಕಿಟಕಿ ಹಾಗೂ ಮತ್ತೊಂದು ಮನೆಯ ಮೇಲ್ಫಾವಣಿಯೂ ಬಿರುಕು ಬಿಟ್ಟಿದೆ.

 

Leave a Reply

comments

Related Articles

error: