ದೇಶಪ್ರಮುಖ ಸುದ್ದಿ

ರೈತರ ಸಾಲದ ಶೇ.5 ಬಡ್ಡಿ ಮನ್ನಾ ಮಾಡಲು ಕೇಂದ್ರ ನಿರ್ಧಾರ ; ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ?

ನವದೆಹಲಿ, ಜೂ.14 : ದೇಶಾದ್ಯಂತ ರೈತರ ಪ್ರತಿಭಟನೆಗಳನ್ನು ತೀವ್ರಗೊಂಡ ಪರಿಣಾಮ ಕೇಂದ್ರ ಸರ್ಕಾರವು ರೈತರ ಸಾಲದ ಮೇಲಿನ ಶೇ.5ರಷ್ಟು ಬಡ್ಡಿ ಮನ್ನ ಮಾಡಲು ನಿರ್ಧರಿಸಿದೆ.

ಕೃಷಿ ಸಾಲಗಳ ಮೇಲೆ ಶೇ.2 ರಷ್ಟು ಬಡ್ಡಿ ಸಬ್ಸಿಡಿ ನೀಡಲು ಹಾಗೂ ಸಕಾಲದಲ್ಲಿ ಮರು ಪಾವತಿ ಮಾಡುವ ರೈತರಿಗೆ ಹೆಚ್ಚುವರಿಯಾಗಿ ಶೇ.3ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಗಿದ್ದು, ಒಟ್ಟಾರೆ ಶೇ.5ರಷ್ಟು ಬಡ್ಡಿ ರಿಯಾಯಿತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರೈತರ ಸಾಲಮನ್ನಾ ರಾಜ್ಯ ಸರ್ಕಾರಗಳ ಹೊಣೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಖಡಾಖಂಡಿತವಾಗಿ ಹೇಳುವ ಮೂಲಕ ಸಾಲಮನ್ನಾ ಜವಾಬ್ದಾರಿಯನ್ನು ರಾಜ್ಯಗಳ ಹೆಗಲಿಗೇ ಕಟ್ಟಿದ್ದರು. ದಿನೇ ದಿನೇ ಏರುತ್ತಿರುವ ಪ್ರತಿಭಟನೆಯ ಕಾವು ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದು, ಕೃಷಿಕರಿಗೆ ಈ ಸಮಾಧಾನಕರ ಕ್ರಮಗಳನ್ನು ಪ್ರಕಟಿಸಲು ಕಾರಣ ಎನ್ನಲಾಗಿದೆ.

ಕಳೆದ ವಾರ ಮಧ್ಯಪ್ರದೇಶದ ಮಂದಸೌರ್‍ನಲ್ಲಿ ಸಾಲಮನ್ನಾಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಗೋಲಿಬಾರ್‍ ಮಾಡಿದ ಕಾರಣ ಐವರು ಕೃಷಿಕರು ಮೃತಪಟ್ಟಿದ್ದರು. ಈ ಘಟನೆ ದೇಶಾದ್ಯಂತ ವ್ಯಾಪಕ ಖಂಡನೆಗೆ ಕಾರಣವಾಗಿತ್ತು. ಈ ಘಟನೆಯಿಂದಾಗಿ ಮಧ್ಯ ಪ್ರದೇಶದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಭಾರೀ ಮುಜುಗರ ಉಂಟಾಗಿತ್ತು.

ಸಂಪೂರ್ಣ ಸಾಲವನ್ನೇ ಮನ್ನಾ ಮಾಡಬೇಕು ಎಂಬ ಬೇಡಿಕೆ ಇಟ್ಟಿರುವ ರೈತರಿಗೆ ಕೇಂದ್ರ ಸರ್ಕಾರದ ಕ್ರಮದಿಂದ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಂತಾಗಿದೆಯಷ್ಟೆ. ಸಣ್ನ ರೈತರಿಗೆ ಇದರಿಂದ ಹೆಚ್ಚಿನ ಪ್ರಯೋಜನವೇನೂ ಇಲ್ಲ. ರಾಜ್ಯ ಸರ್ಕಾರದ ಮೇಲೆ ಸಂಪೂರ್ಣ ಸಬೂಬು ಹೇಳುವ ಬದಲು ಕೇಂದ್ರ ಸರ್ಕಾರ ಕಣ್ಣೊರೆಸುವ ತಂತ್ರಕ್ಕೆ ಮೊರೆಹೋಗಿರುವುದು ಸ್ಪಷ್ಪವಾಗಿದೆ.

-ಎನ್.ಬಿ.ಎನ್.

Leave a Reply

comments

Related Articles

error: