ಕರ್ನಾಟಕ

ಪ್ರವಾಹ ಮುನ್ನೆಚ್ಚರಿಕೆ ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಮಡಿಕೇರಿ, ಜೂ.14 : ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು, ಪ್ರವಾಹ ಮುನ್ನೆಚ್ಚರಿಕೆ ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ನಿರ್ದೇಶನ ನೀಡಿದ್ದಾರೆ.

ಮುಂಗಾರು ಮಳೆ ಸಂದರ್ಭದಲ್ಲಿ ಉಂಟಾಗಬಹುದಾದ ಪ್ರವಾಹ ಮುನ್ನೆಚ್ಚರಿಕೆ ಎದುರಿಸುವ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾವೇರಿ ನದಿ ಪಾತ್ರದ ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಗಂಜಿ ಕೇಂದ್ರ ತೆರೆಯುವುದು, ನಿರಾಶ್ರಿತರನ್ನು ಸ್ಥಳಾಂತರ ಮಾಡುವುದು ಮತ್ತಿತರ ಕಾರ್ಯಗಳನ್ನು ಚುರುಕಿನಿಂದ ನಿರ್ವಹಿಸಬೇಕಿದೆ. ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಆಯಾಯ ಪ್ರದೇಶದ ವ್ಯಾಪ್ತಿಯಲ್ಲಿ ಅಧಿಕಾರಿಗಳ ತಂಡವನ್ನು ನಿಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದರಿಂದ ಆಯಾಯ ಪ್ರದೇಶದ ತಂಡದವರು ಪ್ರವಾಹ, ಮಳೆಹಾನಿ ಸಂಬಂಧಿಸಿದಂತೆ ತ್ವರಿತವಾಗಿ ಮಾಹಿತಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮುಂಗಾರು ಮಳೆ ಸಂದರ್ಭದಲ್ಲಿ ವಿದ್ಯುತ್ ಕಂಬಗಳು, ಮರಗಳು ರಸ್ತೆ ಮೇಲೆ ಬಿದ್ದು ಓಡಾಟಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಜನ ಸಂಚಾರಕ್ಕೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವುದು. ಅಗ್ನಿಶಾಮಕ ಇಲಾಖಾ ಅಧಿಕಾರಿಗಳು ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿ ಯಾವುದೇ ರೀತಿಯ ಹಾನಿಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು. ಹೋಂ ಗಾರ್ಡ್‍ಗಳನ್ನು ನಿಯೋಜಿಸುವುದು, ನುರಿತ ತಜ್ಞ ಈಜುಗಾರರನ್ನು ಕಾಯ್ದಿರಿಸಿಕೊಳ್ಳುವುದು ಮತ್ತಿತರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ನೀಡಿದರು.

ಹೆಚ್ಚಿನ ಮಳೆಯಾಗಿ ಪ್ರವಾಹ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆ ವಹಿಸಬೇಕು. ಗಂಜಿ ಕೇಂದ್ರದಲ್ಲಿ ಗುಣಮಟ್ಟದ ಆಹಾರ, ಕುಡಿಯುವ ನೀರು ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಮಾತನಾಡಿ ಭಾಗಮಂಡಲದಲ್ಲಿ ಹೆಚ್ಚಿನ ಮಳೆಯಾದ ಸಂದರ್ಭದಲ್ಲಿ ಪ್ರವಾಹ ಉಂಟಾಗುತ್ತದೆ. ಅನಾಹುತಗಳನ್ನು ತಡೆಯಲು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು, ಅರಣ್ಯ, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಲೋಕೋಪಯೋಗಿ, ಸೆಸ್ಕ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತಿತರ ಇಲಾಖೆಗಳ ಅಧಿಕಾರಿಗಳು ಪ್ರವಾಹ ಮುನ್ನೆಚ್ಚರಿಕೆಗೆ ಅಗತ್ಯ ತಯಾರಿ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಮಾತನಾಡಿ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬರೆ ಕುಸಿತ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಇಂತಹ ಪ್ರದೇಶಗಳಲ್ಲಿ ಸ್ಥಳೀಯರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಉಪವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡರ್ ಚಂಗಪ್ಪ, ಅಗ್ನಿಶಾಮಕ ದಳದ ಅಧಿಕಾರಿ ಚಂದನ್ ಅವರು ಹಲವು ಮಾಹಿತಿ ನೀಡಿದರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪ್ರವಾಹ ಮುನ್ನೆಚ್ಚರಿಕೆ ಎದುರಿಸುವ ಸಂಬಂಧ ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಹಲವು ಮಾಹಿತಿ ನೀಡಿದರು. ನಾನಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಮುಖ್ಯಾಂಶಗಳು
ಮಳೆಯಿಂದ ರಸ್ತೆ ಮುಳುಗಡೆಯಾಗುವ ಪ್ರದೇಶಗಳಾದ ಕರಡಿಗೋಡು, ಗುಹ್ಯ, ಬಲಮುರಿ, ನೆಲ್ಲಿಹುದಿಕೇರಿ, ಬೇತ್ರಿ, ಬೊಳ್ಳುಮಾಡು, ಹೊದ್ದೂರು, ಎಮ್ಮೆಮಾಡು, ಕಣಿವೆ, ದುಬಾರೆ, ಲಕ್ಷ್ಮಣತೀರ್ಥ ಹೊಳೆ ಮತ್ತು ಭಾಗಮಂಡಲದಂತಹ ಪ್ರದೇಶಗಳಲ್ಲಿ ಅಪಾಯದ ಮಟ್ಟ ಗುರುತಿಸಿ ಕೆಂಪು ಬಾವುಟ ಹಾಕುವುದು. ಜಿಲ್ಲೆಯ ವಿವಿಧ ಇಲಾಖೆಗಳು ನಿರ್ವಹಿಸುತ್ತಿರುವ ಮಳೆ ಮಾಪನ ಕೇಂದ್ರಗಳನ್ನು ಸುಸ್ಥಿತಿಯಲ್ಲಿಟ್ಟು ದೈನಂದಿನ ಮಳೆ ವಿವರವನ್ನು ದಾಖಲಿಸಿ ಸರ್ಕಾರಕ್ಕೆ ಸಲ್ಲಿಸಲು ವ್ಯವಸ್ಥೆ ಮಾಡುವುದು.

ಅಪಾಯ ಸಂಭವಿಸಬಹುದಾದ ಮುನ್ಸೂಚನೆಯನ್ನು ಪ್ರತೀ ದಿನ ದೂರವಾಣಿ ಮುಖಾಂತರ ಅಥವಾ ಪೊಲೀಸ್ ವಯರ್‍ಲೆಸ್ ಮುಖಾಂತರ ಅಥವಾ ಇನ್ನಾವುದೇ ಮಾಧ್ಯಮದ ಮುಖಾಂತರ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಇಂಜಿನಿಯರಿಂಗ್ ವಿಭಾಗ, ಗೃಹ ರಕ್ಷಕ ದಳ, ಅಗ್ನಿ ಶಾಮಕ ದಳ, ಚೆಸ್ಕಾಂ, ಬಿಎಸ್‍ಎನ್‍ಎಲ್ ಇತ್ಯಾದಿ ಇಲಾಖೆಗಳಿಗೆ ಮಾಹಿತಿ ನೀಡುವಲ್ಲಿ ಕ್ರಮವಹಿಸುವುದು ಹಾಗೂ ಜಲಾವೃತ ಪ್ರದೇಶದಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ವ್ಯವಸ್ಥೆ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು.

ಜಲಾವೃತವಾಗುವ ಸ್ಥಳಗಳಾದ ಭಾಗಮಂಡಲ ಹಾಗೂ ದುಬಾರೆಯಲ್ಲಿ ಯಂತ್ರಚಾಲಿತ ದೋಣಿಗಳನ್ನು ನುರಿತ ಚಾಲಕರ ನೇಮಕಾತಿಯೊಂದಿಗೆ ಬಳಸಲು ವ್ಯವಸ್ಥೆ ಮಾಡುವುದು. ಪ್ರವಾಹ ಭೀತಿ ಇರುವ ಸ್ಥಳಗಳಲ್ಲಿ ಜನರ ಪ್ರಾಣ ರಕ್ಷಣೆಗೆ ನುರಿತ ಈಜುಗಾರರನ್ನು ನೇಮಿಸುವುದು. ಜಲಾವೃತ ಪ್ರದೇಶದಿಂದ ತೆರವು ಮಾಡಿದ ಜನರಿಗೆ ತಂಗಲು ಸ್ಥಳೀಯ ಸರ್ಕಾರಿ ಶಾಲೆ ಕಟ್ಟಡಗಳಲ್ಲಿ ವ್ಯವಸ್ಥೆ ಮಾಡುವ ಬಗ್ಗೆ, ಊಟೋಪಚಾರದ ವ್ಯವಸ್ಥೆ ಮಾಡುವ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು. ಸಾಂಕ್ರಾಮಿಕ ರೋಗಗಳು ಹರಡದಂತೆ ವೈದ್ಯಕೀಯ ಚಿಕಿತ್ಸೆ ನೀಡಲು ಸಾಕಷ್ಟು ಔಷಧಿ ದಾಸ್ತಾನಿಡುವ ಬಗ್ಗೆ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿಗಳ ತಂಡವನ್ನು ನೇಮಿಸಲು ಕ್ರಮವಹಿಸುವುದು.

ಭೂಕುಸಿತ ಮತ್ತು ರಸ್ತೆಯ ಮೇಲೆ ಮರ ಬಿದ್ದು, ಸಾರಿಗೆ ಸಂಪರ್ಕ ಕಡಿದು ಹೋಗುವ ಸಂದರ್ಭದಲ್ಲಿ ಈ ರಸ್ತೆಯನ್ನು ಸಂಪರ್ಕ ಯೋಗ್ಯವಾಗಿ ಮಾಡಲು ಅಗತ್ಯ ಸಿಬ್ಬಂದಿ, ಲಾರಿ ಇತ್ಯಾದಿ ನಿಯೋಜಿಸಲು ಕ್ರಮ ವಹಿಸುವುದು. ರಸ್ತೆ ಮೇಲೆ ನೀರು ಹರಿಯದಂತೆ ರಸ್ತೆಯ ಬದಿಗಳ ಚರಂಡಿಗಳ ಮಣ್ಣು ತೆಗೆದು ದುರಸ್ತಿ ಪಡಿಸುವುದು ಹಾಗೂ ಚರಂಡಿಗಳನ್ನು ತೋಡುವ ಬಗ್ಗೆ ಕ್ರಮವಹಿಸುವುದು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: