
ಕರ್ನಾಟಕಪ್ರಮುಖ ಸುದ್ದಿ
ಸಿದ್ದರಾಮಯ್ಯ ಎಲ್ಲರಿಗಿಂತ ಹೆಚ್ಚು ಸಾಲ ಮಾಡಿದ್ದಾರೆ : ಜಗದೀಶ್ ಶೆಟ್ಟರ್
ಬೆಂಗಳೂರು, ಜೂ.15 : ಹಿಂದಿನ ಎಲ್ಲಾ ಮುಖ್ಯಮಂತ್ರಿಗಳಿಗಿಂತ ಸಿಎಂ ಸಿದ್ದರಾಮಯ್ಯ ಅತ್ಯಧಿಕ ಸಾಲ ಮಾಡಿ ರಾಜ್ಯವನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಹಲವಾರು ರಾಜಕೀಯ ಪ್ರೇರಿತ ಯೋಜನೆಗಳಿಗಾಗಿ ರಾಜ್ಯವನ್ನು ಸಾಲದ ಕೂಪದಲ್ಲಿ ತಳ್ಳಿದ್ದಾರೆ. 2013-14 ನೇ ಸಾಲಿನಲ್ಲಿ 18,590 ಕೋಟಿ ರು ಸಾಲ ಮಾಡಿದ್ದಾರೆ, ಆ ನಂತರದ ಆರ್ಥಿಕ ವರ್ಷಗಳಲ್ಲಿಯೂ ಗಣನೀಯವಾಗಿ ಸಾಲ ಮಾಡಲಾಗಿದೆ. 2013ರಲ್ಲಿ ರಾಜ್ಯದ ಒಟ್ಟು ಸಾಲ 1.12 ಲಕ್ಷ ಕೋಟಿ ಇದ್ದರೇ, 2014 ರಲ್ಲಿ 1.36 ಲಕ್ಷ ಕೋಟಿ, 2015 ರಲ್ಲಿ 1.55 ಲಕ್ಷ ಕೋಟಿ, 2016 ರಲ್ಲಿ 1.80 ಲಕ್ಷ ಕೋಟಿ ಹಾಗೂ 2017 ರಲ್ಲಿ ಈ ತನಕ 2.42 ಲಕ್ಷ ಕೋಟಿ ರು ಇದೆ. ಕಾಂಗ್ರೆಸ್ ಸರ್ಕಾರದ ಇನ್ನೂ ಮುಂದೆ ಹೋಗಿ ಒಟ್ಟು 1.29 ಲಕ್ಷ ಕೋಟಿ ರೂ.ಗಳಷ್ಟು ಸಾಲ ಮಾಡಿದೆ. ಇದು ಎಲ್ಲ ದಾಖಲೆಗಳನ್ನು ಮೀರಿಸಿದೆ ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 1.29 ಲಕ್ಷ ಕೋಟಿ ರುಪಾಯಿ ಸಾಲ ಮಾಡಿದೆ. ಇದು ಎಲ್ಲ ಸರ್ಕಾರಗಳ ಅವಧಿಯಲ್ಲಿ ಮಾಡಿದ ಸಾಲಕ್ಕೆ ಹೋಲಿಸಿದರೆ ಅತಿ ಹೆಚ್ಚು ಎನ್ನಬಹುದು. ಹನ್ನೆರಡು ಸಲ ಬಜೆಟ್ ಮಂಡಿಸಿ ಅನುಭವ ಇರುವ ಸಿದ್ದರಾಮಯ್ಯ ಸಾಲ ಮಾಡುವುದಿಲ್ಲ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಸಿದ್ದರಾಮಯ್ಯನವರು ರಾಜ್ಯವನ್ನು ಮತ್ತೆ ಸಾಲದ ಸುಳಿಗೆ ಸಿಲುಕಿಸಿದ್ದಾರೆ. ರಾಜ್ಯ ಸರ್ಕಾರ ರಾಜ್ಯದ ಪ್ರತಿಯೊಬ್ಬ ಪ್ರಜೆಯ ಮೇಲೆ 32 ರಿಂದ 35 ಸಾವಿರ ರು ಸಾಲದ ಹೊರೆ ಹೇರಿದೆ ಎಂದು ಶೆಟ್ಟರ್ ಕಳವಳ ವ್ಯಕ್ತ ಪಡಿಸಿದ್ದಾರೆ.
-ಎನ್.ಬಿ.ಎನ್.