ದೇಶಪ್ರಮುಖ ಸುದ್ದಿ

ಉಗ್ರ ಶಿಬಿರಗಳ ನಾಶ: ಪಾಕ್ ಸೇನೆ – ಸರ್ಕಾರ ಆರಂಭಿಸಿವೆಯೇ ಹೊಸ ನಾಟಕ?

ಉಗ್ರರ ಶಿಬಿರಗಳನ್ನು ನಾಶಪಡಿಸುವಂತೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಆದೇಶ ನೀಡಿದ್ದರೂ ಅದು ಕಾರ್ಯಗತವಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ದೇಶದ ಸೇನೆಗೆ ಪ್ರಧಾನಮಂತ್ರಿ ನೀಡಿದ ಆದೇಶ ನಗಣ್ಯವಾಗಿದ್ದು, ಸೇನೆ ಮತ್ತು ಐಎಸ್‍ಐ ಪ್ರಧಾನಿಗೆ ಸೆಡ್ಡು ಹೊಡೆದಿವೆ ಎನ್ನಲಾಗಿದೆ.

ಅಂತಾರಾಷ್ಟ್ರೀಯ ಸಮುದಾಯದ ಒತ್ತಡ ಅನುಭವಿಸುತ್ತಿರುವ ನವಾಜ್‍ ಷರೀಫ್ ಅವರು ಉಗ್ರರ ಶಿಬಿರಗಳನ್ನು ನಾಶಪಡಿಸುವಂತೆ ಸೇನೆಗೆ ಆದೇಶ ನೀಡಿದ್ದರು. ಆದರೆ ಚುನಾಯಿತ ಸರ್ಕಾರದ ಆದೇಶ ಪಾಲಿಸಲು ಸೇನೆ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ ತಯಾರಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದ್ದು, 26/11 ರ ಮುಂಬೈ ದಾಳಿಯ ಕುರಿತು ತನಿಖೆ ಪೂರ್ಣಗೊಳಿಸುವ ವಿಚಾರದಲ್ಲೂ ರಹೀಲ್ ಷರೀಫ್ ನೇತೃತ್ವದ ಸೇನೆಯ ಸಮ್ಮತವಿಲ್ಲ.

ಯುಎಸ್‍ ಈಗ ಸೂಪರ್ ಪವರ್ ಅಲ್ಲ!

ಇದರ ಜೊತೆಗೆ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ನಿಲುವನ್ನು ಅಮೆರಿಕ ಬೆಂಬಲಿಸದಿದ್ದರೆ ಪಾಕಿಸ್ತಾನವು ತಾನು ರಷ್ಯಾ-ಚೀನಾ ಕೂಟಕ್ಕೆ ಸೇರುವುದಾಗಿಯೂ, ಅಮೆರಿಕ ಈಗ ಸೂಪರ್‍ ಪವರ್‍ ದೇಶ ಅಲ್ಲವೆಂದೂ ವಿಶ್ವಸಂಸ್ಥೆಯಲ್ಲಿರುವ ಪಾಕಿಸ್ತಾನದ ಪ್ರತಿನಿಧಿ ಇತ್ತೀಚೆಗೆ ಹೇಳಿಕೆ ನೀಡಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸುವ ಕುರಿತು ಅಮೆರಿಕ ಸಂಸತ್ತಿನಲ್ಲಿ ನಡೆದ ಯತ್ನಗಳು ಮತ್ತು ಅಂತಾರಾಷ್ಟ್ರೀಯ ಟೀಕೆಗಳಿಂದ ಬೆದರಿರುವ ಪಾಕಿಸ್ತಾನ, ಆತ್ಮರಕ್ಷಣೆಗಾಗಿ ಈ ಹೊಸ ನಾಟಕ ಆರಂಭಿಸಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ಮುಂಬೈ ಮತ್ತು ಪಠಾಣಕೋಟ್ ದಾಳಿಯ ಕುರಿತು ಸೂಕ್ತ ತನಿಖೆ ನಡೆಸಿ ಮಾಹಿತಿಯನ್ನು ಭಾರತದ ಜೊತೆ ಹಂಚಿಕೊಳ್ಳಬೇಕು. ಈ ಮೂಲಕ ಅಂತಾರಾಷ್ಟ್ರೀಯ ಸಮುದಾಯದ ವಿಶ‍್ವಾಸ ಗಳಿಸಬೇಕು ಎನ್ನುವ ನವಾಜ್ ಷರೀಫ್ ಆಸೆಗೆ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಅಡ್ಡಿಯಾಗಿದ್ದು, ಹೀಗೆ ಮಾಡುವುದರಿಂದ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳುವ ವಿಷಯದಲ್ಲಿ ಪಾಕಿಸ್ತಾನ ಇಷ್ಟುಕಾಲ ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಂತೆ ಎನ್ನುವುದು ರಹೀಲ್ ವಾದ ಎನ್ನಲಾಗಿದೆ.

ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ‘ಡಾನ್’ ವರದಿಯಂತೆ, ಗುರುವಾರ ನಡೆದ ನಾಗರಿಕ ಸೇವಾ ಅಧಿಕಾರಿಗಳು, ಮಿಲಿಟರಿ ಅಧಿಕಾರಿಗಳು ಮತ್ತು ಐಎಸ್‍ಐ ಮುಖ್ಯಸ್ಥ ಜನರಲ್‍ ರಿಜ್ವಾನ್‍ ಅಖ್ತರ್‍ ರನ್ನು ಒಳಗೊಂಡಂತೆ ನಡೆದ ಉನ್ನತ ಮಟ್ಟದ ಸಭೆಯ ವೇಳೆ ಈ ಸಂಘರ್ಷ ಬಯಲಾಗಿದೆ. ರಾವಲ್ಪಿಂಡಿಯಲ್ಲಿ ಭಯೋತ್ಪಾದನಾ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿತವಾಗಿರುವ ನ್ಯಾಯಲಯದಲ್ಲಿ ಮುಂಬೈ ಮತ್ತು ಪಠಾಣಕೋಟ್‍ ಪ್ರಕರಣಗಳ ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎನ್ನುವ ನವಾಜ್ ಷರೀಫ್ ಆಶಯಕ್ಕೂ ತಡೆ ಒಡ್ಡಿರುವ ಐಎಸ್‍ಐ ಮುಖ್ಯಸ್ಥ, “ಚೀನಾ ನಮ್ಮ ಬೆಂಬಲಕ್ಕಿರುವಾಗ ಭಾರತ ಮತ್ತು ಅಮೆರಿಕಕ್ಕೆ ಹೆದರುವ ಅಗತ್ಯವಿಲ್ಲ” ಎಂದಿದ್ದಾರೆ ಎಂದು ವರದಿ ಮಾಡಿದೆ.

ಇದರಿಂದ ಉಗ್ರನಿಗ್ರಹ ಕಾರ್ಯಾರಣೆ ಕೈಗೊಳ್ಳುವುದಾಗಿ ಹೇಳುತ್ತಿರುವ ಪಾಕಿಸ್ತಾನದ ನಡವಳಿಕೆ ಕೇವಲ ತತ್ಕಾಲದ ನಾಟಕ ಎಂಬುದು ಸ್ಪಷ್ಟ.

ಆತಂಕಪಡಬೇಕಿಲ್ಲ: ಸ್ಟೊಬ್ದಾನ್

ಈ ವಿಚಾರದಲ್ಲಿ ಚೆನ್ನೈನಲ್ಲಿ ಪ್ರತ್ರಿಕ್ರಿಯೆ ನೀಡಿರುವ ನವದೆಹಲಿಯ ರಕ್ಷಣಾ ಅಧ್ಯಯನ ಮತ್ತು ವಿಶ್ಲೇಷಣಾ ಸಂಸ್ಥೆಯ ಯುರೇಶಿಯಾ ವ್ಯವಹಾರಗಳ ತಜ್ಞ ಪಿ. ಸ್ಟೊಬ್ದಾನ್ ಅವರು, “ವರ್ಷದಿಂದೀಚೆಗೆ ಪಾಕಿಸ್ತಾನಕ್ಕೆ ರಷ್ಯಾ ದಿನೇದಿನೆ ಹತ್ತಿರವಾದಂತೆ ಕಂಡುಬರುತ್ತಿದೆ ನಿಜ. ಆದರೆ ಇದು ಹೆಚ್ಚು ಆತಂಕಪಡುವ ವಿಷಯವಲ್ಲ. ಭವಿಷ್ಯದಲ್ಲಿ ರಷ್ಯಾ ತನ್ನ ನೆರೆ ರಾಷ್ಟ್ರಗಳ ಮೇಲೆ ಹತೋಟಿ ಸಾಧಿಸುವುದೂ ಕೂಡ ಸುಲಭಸಾಧ್ಯವಲ್ಲ” ಎಂದಿದ್ದಾರೆ.

 

Leave a Reply

comments

Related Articles

error: