ಮನರಂಜನೆಮೈಸೂರು

ರೆಟ್ರೋ ಶೈಲಿಯ ‘ನೂರೊಂದು ನೆನಪು’ ಜೂ.16ರಂದು ಮೈಸೂರಿನಲ್ಲಿ ಬಿಡುಗಡೆ

ಮೈಸೂರು.ಜೂ.15 : 1980ರ ದಶಕದ ಸಾಂಸಾರಿಕ ಕಥಾ ಹಂದರವಿರುವ ‘ನೂರೊಂದು ನೆನಪು’ ಚಲನಚಿತ್ರವನ್ನು ನಾಳೆ ಜೂ.16ರಂದು ಮೈಸೂರಿನ ಪ್ರಭಾ ಥಿಯೇಟರ್ ನಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ‘ಆ ದಿನಗಳು ಹಾಗೂ ಮೈನಾ’ ಚಿತ್ರದ ಖ್ಯಾತಿಯ ನಾಯಕ ನಟ ಚೇತನ್ ತಿಳಿಸಿದರು.

ಗುರುವಾರ, ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚೇತನ್ ಮಾತನಾಡಿ ನೂರೊಂದು ನೆನಪು ಚಿತ್ರ ಮರಾಠಿ ಮೂಲ ಕಾದಂಬರಿ ಆಧಾರಿತವಾಗಿದ್ದು ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದೆ. ಚಿತ್ರ 1980ರಲ್ಲಿ ಆರಂಭವಾಗಿ 88ರಲ್ಲಿ ಅಂತ್ಯವಾಗುವ ಕಾಲಘಟ್ಟಕ್ಕೆ ಸೇರಿದೆ.  ಚಿತ್ರದಲ್ಲಿ ನನಗೆ ನಾಯಕಿಯಾಗಿ  ಮೇಘನಾರಾಜ್ ಜೊತೆಯಾಗಿದ್ದು, ತಾರಾಗಣದಲ್ಲಿ ರಾಜೇಶ್, ವೀಣಾ ಸುಂದರ್, ಸುಷ್ಮಿತಾ ಜೋಷಿ, ಯಶ್ ಶೆಟ್ಟಿ ಹಾಗೂ ಇತರರಿದ್ದಾರೆ ಎಂದರು.

ಕುಮರೇಶ್ ನಿರ್ದೇಶನ, ಸೂರಜ್ ದೇಸಾಯಿ-ಮನೀಷ್ ದೇಸಾಯಿ ನಿರ್ಮಾಣದ ಕಾದಂಬರಿ ಆಧಾರಿತ ನೂರೊಂದು ನೆನಪು ಚಿತ್ರದ ನೈಜತೆಗಾಗಿ ಬೆಳಗಾಂ ಮತ್ತು ಧಾರವಾಡದಲ್ಲಿ ಶೇ.90ರಷ್ಟು ಚಿತ್ರೀಕರಿಸಲಾಗಿದೆ. ಕಥೆಯಲ್ಲಿ ನಾಯಕನಿಗೆ ನಿಜವೆನಿಸುವ ವಿಷಯಗಳು ಕ್ರಮೇಣ ಸುಳ್ಳಾಗುವಂತೆ ಸಾಗುತ್ತದೆ. ಮೊದಲಾರ್ಧದಲ್ಲಿ ಪ್ರೀತಿ, ಪ್ರೇಮ, ಹಾಸ್ಯ ಕೊನೆಯಾರ್ಧ ಭಾವಾನಾತ್ಮಕವಾಗಿ  ಅಂತ್ಯಗೊಳ್ಳಲಿದೆ. ಚಿತ್ರದ ಹಾಡುಗಳಿಗೆ ಖ್ಯಾತ ಗಾಯಕರಾದ ವಿಜಯಪ್ರಕಾಶ್, ಕಾರ್ತಿಕ್, ಹರಿಚರಣ್ ಹಾಗೂ ಆಶ್ವಿನ್ ಧ್ವನಿ ನೀಡಿದ್ದಾರೆ ಎಂದರು. ಮೈಸೂರಿಗೂ ನನಗೂ ಅವಿನಾಭಾವ ನಂಟಿದ್ದು ಚಿತ್ರರಂಗದ ಪ್ರವೇಶಕ್ಕೂ ಮುನ್ನ ರಂಗಾಯಣದ ಚಟುವಟಿಕೆಗಳಲ್ಲಿ ಹಾಗೂ ಶಾಲಾ ಶಿಕ್ಷಕನಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಸುದ್ದಿಗೋಷ್ಠಿಯಲ್ಲಿ  ನಿರ್ದೇಶಕ ಕುಮರೇಶ್, ಸಹಾಯಕ ನಿರ್ದೇಶಕ ಲೋಕನಾಥ್ ಹಾಗೂ ಇತರರು ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್, ಎಸ್.ಎಚ್)

Leave a Reply

comments

Related Articles

error: