ಮೈಸೂರು

ಇಂದಿನ ಅರ್ಥವ್ಯವಸ್ಥೆಗೆ ಅಂತರಂಗ ಮತ್ತು ಅಂತಃಕರಣ ಇಲ್ಲ: ಕೋಟಗಾನಹಳ್ಳಿ ರಾಮಯ್ಯ

“ಕಾವೇರಿ ಮತ್ತು ಮಹಾದಾಯಿ ಹೋರಾಟದ ಕಾವು, ಡಾ. ಎಂ.ಎಂ. ಕಲ್ಬುರ್ಗಿ ಹತ್ಯೆಯ ಸೂತಕದ ಛಾಯೆ ಮತ್ತು ಬರಗಾಲದ ಪರಿಸ್ಥಿತಿಗೆ ಈ ಬಾರಿಯ ಕವಿಗೋಷ್ಠಿ ಸಾಕ್ಷಿಯಾಗಿದೆ” ಎಂದು ಕವಿ ಕೋಟಗಾನಹಳ್ಳಿ ರಾಮಯ್ಯ ಹೇಳಿದರು.

ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ದಸರಾ ಉಪಸಮಿತಿಯ ವತಿಯಿಂದ ಅ.7 ರಂದು ಮಾನಸಗಂಗೋತ್ರಿಯ ಮಾನವಿಕ ಸಭಾಗಂಣದಲ್ಲಿ ನಡೆದ ‘ದಸರಾ ಕವಿಗೋಷ್ಠಿಯ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಭವಿಷ್ಯದಲ್ಲಿ ಭರವಸೆ ಇರುವುದರಿಂದ ಭವಿಷ್ಯಕ್ಕೆ ಬೇಕಾದ ಸಾಂಸ್ಕೃತಿಕ ಪಠ್ಯವನ್ನು ಸಿದ್ಧ ಮಾಡುವುದು ನಮ್ಮಂತಹ ಸೃಜನಶೀಲರ ಮೊದಲ ಆದ್ಯತೆ. ಇತ್ತೀಚೆಗೆ ಇಟಲಿ ಮತ್ತು ಮುಸಲೋನಿಯ ಚರಿತ್ರೆಯ ಪುಟಗಳನ್ನು ಮತ್ತೆ ತೆರೆಯುವ ಮುನ್ಸೂಚನೆಗಳು ಕಂಡುಬರುತ್ತಿವೆ. ರಾಜಕಾರಣಿಗಳು ಅಧರ್ಮವನ್ನು ರಾಜಧರ್ಮ ಎಂದು ಕರೆದು ಪ್ರಜಾಪ್ರಭುತ್ವವನ್ನು ಅಣಕು ಮಾಡುತ್ತಿದ್ದೇವೆ ಎಂಬ ಕನಿಷ್ಠಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿದ್ದಾರೆ.”

“ಮೀಸಲಾತಿ ಪ್ರಕರಣಗಳಲ್ಲಿ ನ್ಯಾಯಾಲಯದ ತೀರ್ಪುಗಳು ಅಸಮಾನತೆಯಿಂದ ಕೂಡಿವೆ. ಯೋಜನಾ ಆಯೋಗ ರದ್ದುಪಡಿಸಿ ನೀತಿ ಆಯೋಗವನ್ನು ರಚಿಸುತ್ತಿರುವುದು ರಾಷ್ಟ್ರೀಯ ಮಹಾಪರಾಧ. ಇಂದಿನ ರಾಜಕಾರಣಿಗಳಲ್ಲಿ, ಚಳುವಳಿಗಾರರಲ್ಲಿ ನೆಲದ ಆತ್ಮಶಕ್ತಿ ಕಾಣಿಸುತ್ತಿಲ್ಲ. ಇದು ನಮ್ಮ ದೇಶದ ದೊಡ್ಡ ದುರಂತ. ಕಾರ್ಪೋರೇಟ್ ಬೆಂಬಲಿತ ರಾಜಕಾರಣ (ರೈಟ್‍ ವಿಂಗ್ ಧರ್ಮ) ವಿಪತ್ತಿನ ಮುನ್ಸೂಚನೆ. ಆದ್ದರಿಂದ ವಿನಾಶ ಮತ್ತು ವಿಪತ್ತುಗಳ ಕುರಿತಾಗಿ ಎಲ್ಲರೂ ಯೋಚಿಸಬೇಕಾಗಿದೆ. ಇಂದಿನ ಅರ್ಥವ್ಯವಸ್ಥೆಗೆ ಅಂತರಂಗ ಮತ್ತು ಅಂತಃಕರಣ ಇಲ್ಲ. ಭೇದ ಮೂಲದ ರಾಜಕಾರಣವನ್ನು ಇಂದಿನ ಯುವಕರು ಭೇದಿಸದೇ ಹೋದರೆ ಮುಂದಿನ ದಿನಗಳಲ್ಲಿ ದಯನೀಯ ಭಾರತ ರೂಪುಗೊಂಡು ಕುರುಕ್ಷೇತ್ರ ಯುದ್ಧ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಕವಿ ಲೇಖನಿಯನ್ನು ಬಿಟ್ಟು ಬಂದೂಕನ್ನು ಕೈಗೆತ್ತಿಕೊಳ್ಳುವ ಪರಿಸ್ಥಿತಿ ಬರುತ್ತದೆ ಎಚ್ಚೆತ್ತುಕೊಳ್ಳಿ” ಎಂದು ಪ್ರಸ್ತುತ ಭಾರತದ ರಾಜಕಾರಣ ಪರಿಸ್ಥಿತಿಗೆ ಕೈಗನ್ನಡಿ ಹಿಡಿದರು.

“ಸಮಾನತೆ ಮತ್ತು ಸೌಹಾರ್ದತೆ” ಇಂದಿನ ಕವಿಗೋಷ್ಠಿಯ ಮುಖ್ಯ ಆಶಯ ಎಂದು ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷ ಡಾ.ನೀಲಗಿರಿ ತಳವಾರ್ ಗೋಷ್ಠಿಯ ಆಶಯವನ್ನು ತಿಳಿಸಿದರು.

‍ಖ್ಯಾತ ಸಂಗೀತ ನಿರ್ದೇಶಕ ಕೆ. ಕಲ್ಯಾಣ್ ಅವರು ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಬರಹಗಳು ಪ್ರೀತಿ, ಪ್ರೇಮದ ಸಂಕೇತವಾಗಿರದೆ, ನಾಡಭಕ್ತಿಯ ಸಾಲುಗಳಾಗಿರಬೇಕು. ಸೈನಿಕ, ರೈತ ಮತ್ತು ಕವಿ ಈ ಮೂವರು ಈ ದೇಶದ ಸಂಪತ್ತು. ಇಂದು ನೇರ ನಿಷ್ಠುರತೆಯಿಂದ ಮಾತ್ರ ಹಣತೆ ಬೆಳಗಲು ಸಾಧ್ಯ. ಇದಕ್ಕೆ ಈ ಕವಿಗೋಷ್ಠಿ ನಾಂದಿಯಾಡಲಿ ಎಂದು ಹಾರೈಸಿದರು.

ಈ ಕವಿಗೋಷ್ಠಿ ನಮ್ಮ ಚಿಂತನೆಗಳನ್ನು ಬದಲಾಯಿಸುವ ಆಶಯ ಹೊಂದಿದೆ ಎಂದು ಹಿರಿಯ ಸಾಹಿತಿ ಡಾ.ನಾ. ಮೊಗಸಾಲೆ ಅವರು ಆಶಾಭಾವನೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಉಪ ವಿಶೇಷಾಧಿಕಾರಿ ಎಸ್.ಜೆ.ಸೋಮಶೇಖರ್, ದಸರಾ ಉಪಸಮಿತಿಯ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು.

Leave a Reply

comments

Related Articles

error: