ಮೈಸೂರು

ಮನುಷ್ಯರನ್ನು ವ್ಯಾಪಾರದ ವಸ್ತು ಮತ್ತು ಸರಕಾಗಿ ನೋಡಲಾಗುತ್ತಿದೆ: ದೇವನೂರು ಮಹದೇವ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಜನಾಂದೋಲನಗಳ ಮಹಾಮೈತ್ರಿಯ ಮುಂದಿನ ಹೆಜ್ಜೆಗಳು ಸಮಾಲೋಚನಾ ಸಭೆ ಮತ್ತು ಮೈಸೂರು ಜಿಲ್ಲಾ ಘಟಕದ ರಚನಾ ಸಭೆಯು ಶುಕ್ರವಾರ ದಿ ಇನ್ಸ್‍ಟಿಟ್ಯೂಟ್ ಆಫ್‍ ಇಂಜಿನಿಯರ್ಸ್‍ನ ಎಸ್.ಪಿ. ಭಟ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ ದೇವನೂರು ಮಹದೇವ ಅವರು, ಇಂದು ಶಿಕ್ಷಣ, ಆರೋಗ್ಯ, ನೀರು ವ್ಯಾಪಾರವಾಗುತ್ತಿದೆ. ಈಗ ಮನುಷ್ಯರನ್ನು ವ್ಯಾಪಾರದ ವಸ್ತು ಮತ್ತು ಸರಕಾಗಿ ನೋಡಲಾಗುತ್ತಿದೆ. ಇದು ತುಂಬಾ ಆಘಾತಕಾರಿ ಎಂದು  ವಿಷಾದಿಸಿದರು.

ಪ್ರತಿಯೊಂದನ್ನೂ ಸರಕು ಮತ್ತು ಮಾರಾಟದ ದೃಷ್ಟಿಯಿಂದ ನೋಡಲಾಗುತ್ತಿದೆ. ಸಾರ್ವಜನಿಕ ಸಂಪತ್ತು ಖಾಸಗಿ ಅವರಿಗೆ ಸೇರುತ್ತಿದೆ.  ಕಳೆದ ಬಾರಿ ಭೂ ಸ್ವಾಧೀನ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ನಿಧಾನವಾಗಿ ಖಾಸಗಿ ಅವರಿಗೆ ನೀಡುವ ಸಂಚು ನಡೆದಿತ್ತು. ಪ್ರತಿಭಟನೆಯಾದ ನಂತರ ಅದನ್ನು ಹಿಂದಕ್ಕೆ ತೆಗೆದುಕೊಳ್ಳಲಾಯಿತು. ಪ್ರತಿಯೊಂದನ್ನು ಖಾಸಗಿಯವರಿಗೆ ನೀಡುವ ಹುನ್ನಾರ ಹಾಗೂ ಎಲ್ಲವನ್ನೂ ಸರಕಾಗಿ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಜಾಮ್ ಸರ್ ಕಮಿಟಿ ಜಲ ವಿವಾದದ ಕುರಿತು ಒಂದು ವರದಿ ನೀಡಿದೆ. ಆ ವರದಿಯಲ್ಲಿ ನೀರನ್ನು ಸಾಮಾಜಿಕ ಸರಕು ಎಂದು ಪರಿಗಣಿಸಲಾಗಿದೆ. ನಾವು ನೀರನ್ನು ದೇವತೆ, ಕಾಪಾಡುವ ತಾಯಿ ಎಂದುಕೊಂಡಿದ್ದೆವು. ಆದರೆ, ಅದನ್ನು ಸಾಮಾಜಿಕ ಸರಕು ಎಂದು ಕರೆಯಲಾಗುತ್ತಿದೆ. ನೀರು ಸರಕಾದಾಗ ಉದ್ಯಮಿಗಳಿಗೆ ಅನುಕೂಲವಾಗುತ್ತದೆ, ಇದಾಗಬಾರದು ಎಂದವರು ಕಳಕಳಿ ವ್ಯಕ್ತಪಡಿಸಿದರು.

ಒಂಟಿ ಕಾಲಿನಲ್ಲಿ ನಡೆಯುತ್ತಿದ್ದೇವೆ. ಪ್ರತಿಯೊಬ್ಬರು ಅವರ ಆಲೋಚನೆಗಳನ್ನು ಸಮರ್ಪಕವಾಗಿ ಮಾಡುತ್ತಾ ಪರಸ್ಪರ ಸ್ಪಂದಿಸಿ, ಒತ್ತಾಸೆಯಾಗಿ ಪ್ರಗತಿ ಕಡೆಗೆ ಹೆಜ್ಜೆ ಇಡುವುದು ಹೇಗೆ ಎಂಬುದು ಮಹಾಮೈತ್ರಿಯ ಉದ್ದೇಶ. ಎಲ್ಲರನ್ನೂ ಒಳಗೊಂಡು ಹೋಗುವುದೇ ನಮ್ಮ ನಡಿಗೆ. ಇದಕ್ಕೆ ಎಲ್ಲರೂ ಒಂದುಗೂಡಬೇಕೆಂದು ಹೇಳಿದರು.

ಇದಕ್ಕೂ ಮುನ್ನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರೈತ ಪರ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ, ಭಾರತದ ಆಧಾರ ಸ್ತಂಭಗಳು ಅಲ್ಲಾಡುತ್ತಿವೆ. ಭಾರತ ಎಂಬ ಗದ್ದುಗೆ  ವೈವಿಧ್ಯತೆಯಲ್ಲಿ ಏಕತೆ ಎಂದು ಹೇಳಿಕೊಂಡು ಬಂದಿದ್ದೇವೆ. ಅದರ ಮೇಲೆ ಇಂದು ದಾಳಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತದಲ್ಲಿ ಮಹಾಮೈತ್ರಿಯಲ್ಲಿ ಆಗಬೇಕಾದ ಕೆಲಸ ಕರ್ನಾಟಕದಲ್ಲಿ ಶುರುವಾಗಿದೆ ಎಂದು ಹೇಳಿದರು.

ನಾವೆಲ್ಲರೂ ನಮ್ಮ ಸಂಘಟನೆಗಳ ಕೆಲಸದ ಜೊತೆಗೆ ಇದರಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಕೆಲಸ ಮಾಡಬೇಕು. ನಮ್ಮ ವಿರೋಧಿ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಬೇಗ ಸಂಘಟಿತರಾಗುತ್ತಿದ್ದಾರೆ.  ಆದರೆ, ಪ್ರಗತಿಪರರು ಎಂದು ಹೇಳಿಕೊಳ್ಳುವವರಲ್ಲಿ ಅಹಂಕಾರ ಜಾಸ್ತಿ. ಅದನ್ನು ಮೀರಿ ಕೆಲಸ ಮಾಡಬೇಕು. ಮತ್ತು ಪ್ರತಿಷ್ಠೆಗೂ ಮೀರಿ ಯೋಚನೆ ಮಾಡಬೇಕಾಗಿದೆ ಎಂದು ಹೇಳಿದರು.

ಮಹಿಳಾ ಹೋರಾಟಗಾರ್ತಿ ರೂಪಾ ಹಾಸನ್, ಪರಿಷತ್‌ನ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ, ಬಡಗಲಪುರ ನಾಗೇಂದ್ರ,  ಅಶ್ವತ್ಥ್‌ನಾರಾಯಣ, ವಡ್ಡಗೆರೆ ಚಿನ್ನಸ್ವಾಮಿ, ರವಿ ಕೃಷ್ಣಾರೆಡ್ಡಿ, ಮೀರಾ ನಾಯಕ್, ಪ್ರಸಾದ್ ಕುಂದೂರು, ಹೊಸಕೋಟೆ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: