ಕರ್ನಾಟಕಪ್ರಮುಖ ಸುದ್ದಿ

ವಾಹನಗಳಿಗೆ ಸಂಘಟನೆಗಳ ಬೋರ್ಡ್ ಹಾಕಿಕೊಂಡು ಮೆರೆಯುವ ಪ್ರವೃತ್ತಿಗೆ ಲಗಾಮು

ಬೆಂಗಳೂರು, ಜೂ.15 : ವಿವಿಧ ಸಂಘಟನೆಗಳ ಮುಂಖಡರು ವಾಹನಗಳ ಮುಂದೆ ದೊಡ್ಡದಾಗಿ ಬೋರ್ಡ್ ಹಾಕಿಕೊಂಡು ಮೆರೆದಾಡುವ ಪ್ರವೃತ್ತಿಗೆ ಕಡಿವಾಣ ಹಾಕುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ವಿಧಾನಸಭೆಯ ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಸುರೇಶ್‍ಕುಮಾರ್ ಅವರು ಈ ವಿಷಯ ಪ್ರಸ್ತಾಪಿಸಿ, “ವಿಧಾನಸೌಧದ ಆವರಣದಲ್ಲಿ ನಾನು ಒಂದು ಕಾರು. ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ಸಂಘಟನೆಯ ಸಂಸ್ಥಾಪಕರು” ಎಂದು ದೊಡ್ಡದಾಗಿ ಬೋರ್ಡ್ ಹಾಕಿಕೊಳ್ಳಲಾಗಿತ್ತು. ಇಂತಹ ಬೋರ್ಡ್ ತಗುಲಿಸಿಕೊಂಡು ಓಡಾಡುವವರ ಹಾವಳಿ ತುಂಬಾ ಇದೆ. ಇದು ಸಾರಿಗೆ ಇಲಾಖೆ ಅಧಿಕಾರಿಗಳ ಕಣ್ಣಿಗೆ ಯಾಕೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದರು. ದಿನನಿತ್ಯ ಕಚೇರಿಗೆ ಹೋಗಿಬರುವವರನ್ನು ತಡೆದು ಅನಗತ್ಯ ಕಿರುಕುಳ ನೀಡುವ ಅಧಿಕಾರಿಗಳು, ಹೀಗೆ ಅನಗತ್ಯವಾಗಿ ಬೋರ್ಡ್ ಹಾಕಿಕೊಂಡು ದರ್ಪ ತೋರುವವರ ಬಗ್ಗೆ ಕಾಣಿಸುತ್ತಿಲ್ಲವೇ ಎಂದು ವಾಗ್ದಾಳಿ ನಡೆಸಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಬಿಬಿಎಂಪಿ, ಪಂಚಾಯಿತಿ ಸದಸ್ಯರು, ದಲಿತ ಸಂಘರ್ಷ ಸಮಿತಿ ಸದಸ್ಯರು ಇಂತಹ ಬೋರ್ಡ್‍ಗಳನ್ನು ಹಾಕಿಕೊಂಡಿದ್ದಾರೆ. ಸಾರಿಗೆ ಇಲಾಖೆಯಲ್ಲಿ ಕೇವಲ 350 ಜನ ಇನ್‍ಸ್ಪೆಕ್ಟರ್‍ಗಳು ಮಾತ್ರ ಇದ್ದಾರೆ. ಅವರಲ್ಲಿ ಕೆಲವರು ಆರ್‍ಟಿಒ ಕಚೇರಿಯಲ್ಲಿ ಕೆಲಸ ಮಾಡಬೇಕು ಹೀಗಾಗಿ ಪೊಲೀಸ್ ಇಲಾಖೆ ಸಹಕಾರ ಪಡೆದು ಇಂತಹ ಬೋರ್ಡ್ ಹಾಕಿಕೊಳ್ಳುವವರನ್ನು ನಿಯಂತ್ರಿಸಬಹುದು. ಪೊಲೀಸ್ ಇಲಾಖೆಯಿಂದ ಕ್ರಮ ಜರುಗಿಸುವಂತೆ  ಗೃಹಸಚಿವರ ಚರ್ಚೆ ಇಂದೇ ನಡೆಸುತ್ತೇನೆ ಎಂದು ಹೇಳಿದರು.

ಸಭಾದ್ಯಕ್ಷ ಕೆ.ಬಿ.ಕೋಳಿವಾಡ ಅವರೂ ಇಂತಹ ಅನಧಿಕೃತ ಬೋರ್ಡ್‍ಗಳನ್ನು ತೆಗೆಸಿ ಹಾಕಿ ಕಡಿವಾಣ ಹಾಕಬೇಕು ಎಂದು ಸೂಚನೆ ನೀಡಿದರು.

-ಎನ್.ಬಿ.ಎನ್.

Leave a Reply

comments

Related Articles

error: