ಮೈಸೂರು

ಪ್ರತಿಷ್ಠಾಪನಾ ಕಲೆಯ ಮೂಲಕ ಜಾಗೃತಿ

ಕಾಡು ಮಾಯವಾಗಿವೆ. ಮರಗಿಡಗಳು ಇಲ್ಲದಾಗಿದೆ. ಇದರಿಂದ ಮಳೆಯೂ ಬರದಂತಾಗಿದ್ದು ನೀರಿಗಾಗಿ ಬಡಿದಾಡುವಂತಾಗಿದೆ. ಮರಗಳನ್ನೆಲ್ಲ ಕಡಿದ ಪರಿಣಾಮ ಜೀವ ಜಲ ಬತ್ತುತ್ತಿದೆ. ಕಾಡಿಲ್ಲದ ಪರಿಸ್ಥಿತಿಯಿಂದ ಅಲ್ಲಿನ ಪ್ರಾಣಿಗಳು ನಾಡಿಗಾಗಮಿಸುತ್ತಿವೆ. ಎಲ್ಲ ಕಡೆ ಬೃಹತ್ ಕಟ್ಟಡಗಳು ತಲೆ ಎತ್ತುತಲಿದ್ದು, ಸಿಮೆಂಟ್ ಕಾಡುಗಳು ಸೃಷ್ಟಿಯಾದಂತಿದೆ. ಮುಂದೊಂದು ದಿನ ಮರಗಿಡಗಳಿಲ್ಲದೇ ಉಸಿರಾಡಲು ಗಾಳಿಯಿಲ್ಲದೇ, ಕುಡಿಯಲು ನೀರಿಲ್ಲದೇ ನರಳ ಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಯೇನಿಲ್ಲ.  ಈ ಕುರಿತಂತೆ  ಜಾಗೃತಿ ಮೂಡಿಸಲು ಕಲಾಮಂದಿರದಲ್ಲಿ ಕೆಲವು ಕಲಾವಿದರು  ಅಣಕು ನೋಟದ ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದಿದ್ದಾರೆ.

ದಸರಾ ಉತ್ಸವದ ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯ ವತಿಯಿಂದ ನಡೆಯುತ್ತಿರುವ ಕಲಾಪ್ರದರ್ಶನದಲ್ಲಿ ಪ್ರತಿಷ್ಠಾಪನಾ ಕಲೆ ಗಮನ ಸೆಳೆಯಿತು. ಇದೀಗ ರಾಜ್ಯದಲ್ಲಿ ಕಾವೇರಿ ವಿವಾದ ಬೂದಿ ಮುಚ್ಚಿದ ಕೆಂಡದಂತಿದ್ದು, ಸುಪ್ರೀಂಕೋರ್ಟ್ ಅದಕ್ಕೆ ತುಪ್ಪ ಸುರಿದಂತೆ ತಮಿಳುನಾಡಿಗೆ ನೀರು ಬಿಡಲು ಆದೇಶಿಸುತ್ತಲೇ ಇದೆ. ಸುಪ್ರೀಂಕೋರ್ಟ್ ಆದೇಶ ಮುರಿಯಲಾರದೇ ಇತ್ತ ರೈತರ ಸಂಕಷ್ಟಕ್ಕೆ ಸ್ಪಂದಿಸಲಾರದ ಸ್ಥಿತಿ ಸರ್ಕಾರದ್ದು. ಕುಡಿಯಲಿಕ್ಕೂ ಹನಿಹನಿ ನೀರಿಗಾಗಿ ಪರಿತಪಿಸಬೇಕಾದ ಸ್ಥಿತಿ ರಾಜ್ಯದ್ದು. ಇದಕ್ಕೆ ಇಂಬುಕೊಟ್ಟಂತೆ ತೆಂಗಿನ ಗರಿಯನ್ನು ಬಳಸಿ ನವಿಲನ್ನು ನಿರ್ಮಿಸಿದ್ದು, ಕಾಡೆಲ್ಲ ಬರಿದಾಗಿ, ಹೂವೆಲ್ಲಾ ಬರಡಾಗಿ ಬಳಲಿ, ಒಣಗಿ, ನೀರನರಸಿ ಪಟ್ಟಣಕ್ಕೆ ಬಂದಿದೆ ಎಂಬಂತೆ ಬಿಂಬಿಸಿ ಒಂದು ಕಡೆ ಜಾಗೃತಿಯನ್ನು ಮೂಡಿಸಿದರೆ, ಇನ್ನೊಂದು ಕಡೆ ಅಣುಕು ನೋಟವನ್ನು ಬಿಂಬಿಸಲಾಗಿದೆ.

ಇಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ವರ್ಜ್ಯ ಮಾಡಲಾಗಿದ್ದು ಕೇವಲ ನೈಸರ್ಗಿಕ ವಸ್ತುಗಳನ್ನಷ್ಟೇ ಬಳಸಲಾಗಿದೆ. ಅದರಲ್ಲೂ ಕಸದಿಂದ ರಸ ಎಂಬಂತೆ ಅನುಪಯುಕ್ತ ವಸ್ತುಗಳನ್ನು, ಉಪಯುಕ್ತ ವಸ್ತುಗಳನ್ನಾಗಿಸುವ ಚಾತುರ್ಯವನ್ನು ತೋರಲಾಗಿದೆ. ಹನಿಹನಿನೀರನ್ನು ಜೋಪಾನವಾಗಿಸುವ ಕಲೆಯನ್ನು ಬೆಳೆಸಿಕೊಳ್ಳುವ ಜೊತೆ, ಪ್ರಾಣಿ-ಪಕ್ಷಿಗಳನ್ನು ಬದುಕಲು ಬಿಡಿ, ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡು ಹೋಗಿ ಎನ್ನುವ ನಿಟ್ಟಿನಲ್ಲಿ ರೂಪಗೊಂಡ ಪ್ರತಿಷ್ಠಾಪನಾ ಕಲೆ ಪ್ರೇಕ್ಷಕರ ಮನ ಗೆಲ್ಲುವುದರ ಜೊತೆ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತಿರುವುದು ವಿಶೇಷ.

Leave a Reply

comments

Related Articles

error: