ಮೈಸೂರು

ಡ್ಯಾನ್ಸ್ ಮ್ಯೂಸಿಯಂ ಮೇಲೆ ಗೂಂಡಾಗಳಿಂದ ದಾಳಿ

ಮೈಸೂರು,ಜೂ.16-ಸ್ಥಳ ವಿವಾದದ ಹಿನ್ನೆಲೆ ನಗರದ ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಡ್ಯಾನ್ಸ್ ಮ್ಯೂಸಿಯಂ ಗೆ ಗೂಂಡಾಗಳು ನುಗ್ಗಿ ದಾಂದಲೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.

ಸ್ಥಳ ವಿವಾದದ ವ್ಯಾಜ್ಯ ಮೈಸೂರಿನ 2ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿದ್ದರೂ ಮ್ಯೂಸಿಯಂ ಖಾಲಿ ಮಾಡಿಸಲು ಸ್ಥಳದ ಮಾಲೀಕ ಜೆ.ಸಿ.ಲೇಔಟ್ ನ ಸೋಮೇಶ್ ಗೂಂಡಾಗಳನ್ನು ಕಳುಹಿಸಿ ಕಾನೂನು ಬಾಹಿರವಾಗಿ ಮ್ಯೂಸಿಯಂ ಖಾಲಿ ಮಾಡಿಸಲು ಯತ್ನಿಸಿದ್ದಾರೆ.

ಬೆಳಿಗ್ಗೆ 9 ಗಂಟೆ ಸುಮಾರಿಗೆ ಮ್ಯೂಸಿಯಂನ ಸಿಬ್ಬಂದಿ ಬಂದು ಬಾಗಿಲು ತೆರೆಯುತ್ತಿದ್ದಂತೆ ಬಂದ ನಾಲ್ಕು ಜನ ಗೂಂಡಾಗಳ ಗುಂಪು ಅಲ್ಲಿದ್ದ ಪೀಠೋಪಕರಣವನ್ನ ಧ್ವಂಸ ಮಾಡಿ, ಪ್ರದರ್ಶನದ ಬೊಂಬೆಗಳಿಗೆ ಹಾನಿ ಮಾಡಿರುವುದಲ್ಲದೆ, ಮಹಿಳಾ ಸಿಬ್ಬಂದಿಗೆ ಪ್ರಾಣ ಬೆದರಿಕೆವೊಡಿದ್ದಾರೆ. ಜತೆಗೆ ದಾಂದಲೆ ದೃಶ್ಯಗಳು ಚಿತ್ರೀಕರಣವಾಗದಂತೆ ಸಿಸಿಟಿವಿ ಪರಿಕರಗಳನ್ನು ಹೊತ್ತೊಯ್ದಿದ್ದಾರೆ.

ಸೋಮೇಶ್ ಎಂಬುವರ ಜಾಗವನ್ನು ಕೇರಳದ ಭಾಸ್ಕರನ್ ಎಂಬವರು 5 ವರ್ಷಗಳ ಕಾಲ ಬಾಡಿಗೆ ಪಡೆದಿದ್ದು, ಡ್ಯಾನ್ಸ್ ಮ್ಯೂಸಿಯಂ ನಡೆಸುತ್ತಿದ್ದಾರೆ. ಪ್ರತಿ ತಿಂಗಳು 10 ಸಾವಿರದಂತೆ ಬಾಡಿಗೆ ನೀಡುತ್ತಿದ್ದು, ಒಂದು ಲಕ್ಷ ರೂ. ಮುಂಗಡ ಹಣವನ್ನು ಕೊಟ್ಟಿದ್ದಾರೆ. ಆದರೆ ಈಗ ಮತ್ತೊಬ್ಬರು ಇದೇ ಜಾಗಕ್ಕೆ ಹೆಚ್ಚು ಬಾಡಿಗೆ ನೀಡಲು ಮುಂದೆ ಬಂದ ಹಿನ್ನೆಲೆಯಲ್ಲಿ ಸೋಮೇಶ್ ಗೂಂಡಾಗಳನ್ನು ಬಿಟ್ಟು ದಾಂದಲೆ ನಡೆಸಿ ಸ್ಥಳ ಖಾಲಿ ಮಾಡಿಸಲು ಯತ್ನಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ನಜರ್ ಬಾದ್ ಠಾಣೆ ಇನ್ಸ್ಪೆಕ್ಟರ್ ಶೇಖರ್ ದಾಂದಲೆ ಮಾಡಿದ ಆರೋಪಿಯೊಂದಿಗೆ ಕಾಲ ಕಳೆದಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವ ಅನುಮಾನಗಳು ಮೂಡಿದೆ. (ವರದಿ-ಆರ್.ವಿ, ಎಂ.ಎನ್)

Leave a Reply

comments

Related Articles

error: