ಪ್ರಮುಖ ಸುದ್ದಿ

ಇಬ್ಬರು ಜಿಂಕೆ ಬೇಟೆಗಾರರ ಬಂಧನ

ಪ್ರಮುಖ ಸುದ್ದಿ, ಹಲಗೂರು, ಜೂ.16: ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಕೊಂಡೊಯ್ಯುತ್ತಿದ್ದ ಇಬ್ಬರು ಬೇಟೆಗಾರರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

ಬೀರೋಟ ಗ್ರಾಮದ ತಿಮ್ಮೇಗೌಡ, ತಮಿಳುನಾಡಿನ ಪೆರಂದೂರು ಜಿಲ್ಲೆಯ ಸಣ್ಣೆಮಲೈ ಗ್ರಾಮದ ವಾಸಿ ಸೆಲ್ಲಪನ್ ಬಂಧಿತರು. ಬಸವನಬೆಟ್ಟದ ಮೀಸಲು ಅರಣ್ಯ ಪ್ರದೇಶದ ತಾಳವಾಡಿ ಸಮೀಪದ ಆನೆಬಿದ್ದ ಹಳ್ಳದ ಬಳಿ ಜಿಂಕೆಯನ್ನು ಬೇಟೆ ನಾಯಿಗಳಿಂದ ಹಿಡಿಸಿ, ಅದನ್ನು ಸಾಯಿಸಿ ಮಾಂಸವನ್ನು ಕೊಂಡೊಯ್ಯುತ್ತಿದ್ದಾಗ ಅರಣ್ಯಾಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಇತ್ತೀಚೆಗೆ ಮುತ್ತತ್ತಿಯಲ್ಲಿ ಜಿಂಕೆಗಳೆರಡು ಕಿಡಿಗೇಡಿಗಳು ಹಾಕಿದ್ದ ಉರುಳಿಗೆ ಸಿಕ್ಕಿಹಾಕಿಕೊಂಡಿದ್ದವು. ಅವುಗಳ ಕಿರುಚಾಟ ಕೇಳಿ ದಾರಿಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರಿಬ್ಬರು ಕಾಡಿನೊಳಗೆ ಹುಡುಕಾಡಿ ಜಿಂಕೆಗಳನ್ನು ಉರುಳಿನಿಂದ ಬಿಡಿಸಿದ್ದರು.

ಈ ಹಿನ್ನೆಲೆಯಲ್ಲಿ ರಾತ್ರಿ ಹೊತ್ತು ಗಸ್ತು ತಿರುಗುವಂತೆ ಮತ್ತು ಜಿಂಕೆ ಹತ್ಯೆ ತಡೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇಲಾಖೆಯಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬಸವನಬೆಟ್ಟದ ಮೀಸಲು ಅರಣ್ಯ ಪ್ರದೇಶದ ತಾಳವಾಡಿ ಸಮೀಪ ಗಸ್ತಿನಲ್ಲಿದ್ದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳ ವಿರುದ್ಧ ಅರಣ್ಯ ಇಲಾಖೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. (ವರದಿ ಬಿ.ಎಂ)

Leave a Reply

comments

Related Articles

error: