ಕರ್ನಾಟಕ

ಚಿಕ್ಕನಾಯಕನಹಳ್ಳಿಯಲ್ಲಿ ಡೆಂಗ್ಯೂ ಮಾರಿ : ಜನರಲ್ಲಿ ಹೆಚ್ಚಿದೆ ಆತಂಕ

ರಾಜ್ಯ(ತುಮಕೂರು) ಜೂ. 16:- ಚಿಕ್ಕನಾಯಕನ ಹಳ್ಳಿಯಲ್ಲಿ  ಮಾರಣಾಂತಿಕ ಡೆಂಗ್ಯೂ ಜ್ವರ ಪಟ್ಟಣದಲ್ಲಿ ಹರಡುತ್ತಿರುವುದರಿಂದ ಜನರಲ್ಲಿ ಭಯದ ವಾತಾವರಣ ಸೃಷ್ಠಿಯಾಗುತ್ತಿದೆ. ಪಟ್ಟಣದ 13ನೇ ವಾರ್ಡಿನ ಕೃಷ್ಣಮೂರ್ತಿ ಎಂಬುವರ ಪುತ್ರಿ ರಾಜೇಶ್ವರಿ (17) ಡೆಂಗ್ಯೂ ಜ್ವರಕ್ಕೆ ಬಲಿಯಾಗಿರುವ ದುರ್ದೈವಿಯಾಗಿದ್ದಾಳೆ.

ಮೃತ ಯುವತಿಯ ಕುಟುಂಬಿಕರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಜೂ. 10 ರಂದು ಚಳಿ ಜ್ವರ ಕಾಣಿಸಿಕೊಂಡಿತು, ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ತಮ್ಮನ ಮಗಳಾದ ರಾಜೇಶ್ವರಿಯನ್ನು ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ  ಚಿಕಿತ್ಸೆ ನೀಡಿ ರಕ್ತವನ್ನು ಪರೀಕ್ಷೆಗಾಗಿ ಪಡೆದು ವರದಿಯನ್ನು ದೂರವಾಣಿ ಮುಖಾಂತರ ತಿಳಿಸಲಾಗುವುದು ಎಂದು ಹೇಳಿ ವಿಳಾಸ ಹಾಗೂ ಮೊಬೈಲ್ ನಂಬರನ್ನು ತೆಗೆದುಕೊಂಡು, ಜೂ. 15 ಆದರೂ ರೋಗದ ಬಗ್ಗೆ ವರದಿ ಸಿಗಲಿಲ್ಲ. ವೈದ್ಯರು ಚುಚ್ಚು ಮದ್ದು ನೀಡಿದ ಬಳಿಕ ಆರೋಗ್ಯ ಸ್ಥಿತಿ ಗಂಭೀರವಾದಾಗ ಆಕೆಯನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದರು. ಅಲ್ಲಿ ಯಾರು ಚಿಕಿತ್ಸೆ ನೀಡಲು ದಾಖಲಿಸಿಕೊಳ್ಳಲಿಲ್ಲ. ಅಷ್ಟರ ಹೊತ್ತಿಗೆ ಪ್ರಾಣ ಹೋಯಿತು. ತಡವಾಗಿ ಬಂದ ವರದಿಯಲ್ಲಿ ಡೆಂಗ್ಯೂ ಜ್ವರವಾಗಿರುವುದು ಗೊತ್ತಾಯಿತು. ಚಿಕ್ಕನಾಯಕನಹಳ್ಳಿ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ರಕ್ತ ಪರೀಕ್ಷೆಯ ವರದಿಯನ್ನು ನೀಡಿದ್ದರೆ, ಡೆಂಗ್ಯೂ ಜ್ವರಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಿ ಜೀವ ಉಳಿಸಿಕೋಳ್ಳುತ್ತಿದ್ದೆವು ಎಂದು ಕಣ್ಣೀರಿಟ್ಟರು.

18ನೇ ವಾರ್ಡಿನಲ್ಲೂ 4 ಜನಕ್ಕೆ ಡೆಂಗ್ಯೂ ಜ್ವರ ಬಂದಿದ್ದು, ಆ ಪೈಕಿ ಎರಡು ಜೀವ ಕಳೆದುಕೊಂಡಿರುವ ವರದಿಯಾಗಿದೆ. ಇಲ್ಲಿನ ದೊಡ್ಡ ಚರಂಡಿ ಹಾಗೂ ಹೊಂಬಾಳಮ್ಮನ ದೇವಾಲಯದ ಹತ್ತಿರವಿರುವ ಚರಂಡಿಯಲ್ಲಿ ಕಸ ಕಟ್ಟಿ ಸರಿಯಾಗಿ ಕೊಳಚೆ ನೀರು ಹರಿಯದೆ ಸೊಳ್ಳೆಗಳ ಉತ್ಪಾದನಾ ಕಾರ್ಖಾನೆಯಾಗಿದೆ. ಇಲ್ಲಿನ ಸುತ್ತಮುತ್ತಲಿನ ಪರಿಸರದಲ್ಲಿ ಪ್ರತಿ ದಿನ ಮಕ್ಕಳು ಜ್ವರದಿಂದ ಬಳಲುತ್ತಿದ್ದಾರೆ. ಟೈಲರ್ ಪರಮೇಶ್ ಪುತ್ರಿ ಅಮೃತಳಿಗೆ ಜ್ವರ ಕಾಣಿಸಿಕೊಂಡ ನಂತರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ಡೆಂಗ್ಯೂ ಜ್ವರಕ್ಕೆ 2 ಲಕ್ಷ ಖರ್ಚು ರೂ. ಮಾಡಿ ಚಿಕಿತ್ಸೆ ಕೊಡಿಸಿ ಮಗಳ ಜೀವವನ್ನು ಉಳಿಸಿಕೊಂಡರು. ಇದೇ ವಾರ್ಡಿನ 6 ತಿಂಗಳ ಮಗುವು ಕೂಡ ಡೆಂಗ್ಯೂ ಜ್ವರಕ್ಕೆ ತುತ್ತಾಗಿದೆ. 18ನೇ ವಾರ್ಡಿಗೆ ಸುಮಾರು 2 ತಿಂಗಳಿನಿಂದ ಡೆಂಗ್ಯೂ ಕಾಣಿಸಿಕೊಂಡಿದೆ  ಪುರಸಭಾಧ್ಯಕ್ಷ  ಸಿ.ಡಿ. ಚಂದ್ರಶೇಖರ್‍ ಮಾತನಾಡಿ ಕಸಮುಕ್ತ ಪಟ್ಟಣವನ್ನಾಗಿಸುವುದು ನನ್ನ ಗುರಿಯಾಗಿದ್ದು, ಈಗಾಗಲೆ ಪಟ್ಟಣದ ತೇರು ಬೀದಿ, ವಿನಾಯಕ ನಗರ, ಕಾಳಮ್ಮನ ಗುಡಿಬೀದಿ, ಜೋಗಿ ಬಾವಿಸಂದಿ, ಮುಸ್ಲಿಂ ಪ್ರದೇಶ ಬುಗುರಿಮರದ ಹತ್ತಿರ, ಎಲ್ಲಾ ಭಾಗಗಳನ್ನು ಖುದ್ದಾಗಿ ಪರಿಶೀಲಿಸಿದ್ದೇನೆ. ಕೊಳಚೆ ನಿರ್ಮೂಲನೆಗೆ ಹಾಗೂ ಕಸ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಮೂರ್ನಾಲ್ಕು ದಿನದಲ್ಲಿ ಪುರಸಭೆಯ ಸಭಾಂಗಣದಲ್ಲಿ ತುರ್ತು ಸಭೆ ಕರೆದು, ಸಭೆಗೆ ಶಾಸಕರನ್ನು ಆಹ್ವಾನಿಸಲಾಗುವುದು. ಜತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸೇರಿಸಿಕೊಂಡು ಹರಡುತ್ತಿರುವ ಡೆಂಗ್ಯೂ ಜ್ವರವನ್ನು ತಡೆಗಟ್ಟಲು ಚರ್ಚಿಸಲಾಗುವುದು. ಖಾಲಿ ಇರುವ ನಿವೇಶನಗಳಲ್ಲಿ ತ್ಯಾಜ್ಯ ವಸ್ತುಗಳ ಕಸ ಹಾಗೂ ಪೊದೆಗಳು ಇರುವುದರಿಂದ ಇಲ್ಲಿ ಹಂದಿಗಳು ವಾಸಿಸುತ್ತವೆ. ಕೂಡಲೇ ನೈರ್ಮಲ್ಯ ತುಂಬಿಕೊಂಡಿರುವ ನಿವೇಶನದ ಮಾಲೀಕರಿಗೆ ತೆರವುಗೊಳಿಸುವಂತೆ ಪುರಸಭೆಯಿಂದ ನೋಟಿಸ್ ಜಾರಿ ಮಾಡಲಾಗುವುದು ಹಾಗೂ ಸ್ವಚ್ಚಗೊಳಿಸದೆ ಇದ್ದಲ್ಲಿ ಪುರಸಭೆಯಿಂದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು. ಪುರಸಭೆಯಲ್ಲಿರುವ 2 ಫಾಗಿಂಗ್ ಯಂತ್ರ ಪೈಕಿ ಒಂದು ಕೆಲಸ ಮಾಡುತ್ತಿದ್ದು, ಕೆಟ್ಟು ಹೋಗಿರುವ ಇನ್ನೊಂದು ಯಂತ್ರವನ್ನು ಶೀಘ್ರವಾಗಿ ರಿಪೇರಿ ಮಾಡಿಸಲಾಗುವುದು. 23 ವಾರ್ಡ್‌ಗಳಲ್ಲಿ ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಹಾಕುವ ಕಾರ್ಯವನ್ನು ಈಗಾಗಲೇ ಶುರು ಮಾಡಿದೆ. ಅವಶ್ಯಕವಾಗಿ ತಾಲೂಕು ಮಟ್ಟದ ಆಸ್ಪತ್ರೆಯ ಲ್ಯಾಬ್‍ನಲ್ಲಿ ಡೆಂಗ್ಯೂ ಜ್ವರವನ್ನು ಕಂಡು ಹಿಡಿಯುವ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕಾಗಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: