ಕರ್ನಾಟಕದೇಶಪ್ರಮುಖ ಸುದ್ದಿ

ಮಂಡ್ಯ ಮೂಡಾ ನಿವೇಶನ ಹಗರಣ ; ಅನುಮಾನ ಮೂಡಿಸಿದ ಸಿಬಿಐ ವಿಳಂಬ ಧೋರಣೆ

ಬೆಂಗಳೂರು, ಜೂ.17 : ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪಿಗಳ ವಿರುದ್ಧ ವಿಚಾರಣೆ ನಡೆಸಲು ಸಿಬಿಐ ವಿಳಂಬ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮಂಡ್ಯ ಸಂಸದ ಸಿ.ಎಸ್​. ಪುಟ್ಟರಾಜು, ಮಾಜಿ ಶಾಸಕ ಎಂ.ಶ್ರೀನಿವಾಸ್​, ಹಾಲಿ ಶಾಸಕ ಎ.ಬಿ.ರಮೇಶ್​ ವಿರುದ್ಧದ ವಿಚಾರಣೆಗೆ ವಿಧಾನಸಭೆ ಸ್ಪೀಕರ್​ ಅನುಮತಿ ನೀಡಿ ಹಲವು ತಿಂಗಳುಗಳೇ ಕಳೆದಿವೆ. ಭ್ರಷ್ಟಾಚಾರ ಅಧಿನಿಯಮ 1988ರ ಪ್ರಕರಣ 19(1)ರ ಅಡಿಯಲ್ಲಿ ಸಭಾಧ್ಯಕ್ಷರು ಅಭಿಯೋಜನಾ ಮಂಜೂರಾತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು.

ಇದನ್ನಾಧರಿಸಿ ಸಿಬಿಐ ನೇರವಾಗಿ ಸಂಸದ, ಶಾಸಕರನ್ನು ವಿಚಾರಣೆಗೆ ಕರೆಸಬೇಕಿತ್ತು. ಅಭಿಯೋಜನಾ ಮಂಜೂರಾತಿಯನ್ನು ಸಿಆರ್​ಪಿಸಿ ಕಲಂ 197ರ ಅಡಿಯಲ್ಲಿ ಕೋರಿದ್ದ ಸಿಬಿಐ, ಮಂಜೂರಾತಿ ತಿರಸ್ಕರಿಸಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸ್ಪಷ್ಟವಾಗಿ ನಮೂದಿಸಿಲ್ಲ. ಹೀಗಾಗಿ ಮುಂದಿನ ಕ್ರಮದ ಬಗ್ಗೆ ಕಾನೂನು ಅಭಿಪ್ರಾಯ ಪಡೆಯಲು ಮುಂದಾಗಿದೆ. ಸಿಬಿಐನ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಾಜ್ಯ ಸರ್ಕಾರ ವಿಶೇಷ ಅಭಿಯೋಜನಾ ಮಂಜೂರಾತಿಗೆ ಬಾಕಿ ಇರುವ ಪ್ರಕರಣಗಳಲ್ಲಿ ಮಂಜೂರಾತಿ ಬಾಕಿ ಉಳಿಸಿಕೊಂಡಿರುವ ಕಾರಣ ಪ್ರಕರಣದ ವಿಚಾರಣೆಗೆ ತಡೆಯಾಗುತ್ತಿದೆ ಎಂದು ಕೇಂದ್ರ ಜಾಗೃತ ಆಯೋಗದ ಆಯುಕ್ತ ಕೆ.ವಿ.ಚೌಧುರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ಈ ಪತ್ರ ಆಧರಿಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದರು. ಸಿಎಂ ಸೂಚನೆಯಂತೆ ನಗರಾಭಿವೃದ್ಧಿ ಇಲಾಖೆ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ, ಶಾಸಕರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಬಗ್ಗೆ ಸಭಾಧ್ಯಕ್ಷರಿಗೆ ಪತ್ರ ಬರೆದಿತ್ತು.

ಮಂಡ್ಯದ ನಗರಾಭಿವೃದ್ಧಿ ಪ್ರಾಧಿಕಾರ ರಚಿಸಿದ್ದ ಬಡಾವಣೆಯಲ್ಲಿ 107 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ನಿವೇಶನ ಪಡೆದವರ ಪೈಕಿ ಶಾಸಕರು, ಕೆಲ ಚುನಾಯಿತ ಜನಪ್ರತಿನಿಧಿಗಳಿದ್ದರು. ಈ ಪ್ರಕರಣ ಕುರಿತು ತನಿಖೆ ನಡೆಸಲಿಕ್ಕೆ ರಾಜ್ಯ ಸರ್ಕಾರವೇ ನೇರವಾಗಿ ಸಿಬಿಐಗೆ ವಹಿಸಿತ್ತು. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಪ್ರಾಧಿಕಾರದ ಕೆಳ ಹಂತದ ನೌಕರರ ವಿರುದ್ಧ ತತ್​ ಕ್ಷಣವೇ ವಿಚಾರಣೆ ನಡೆಸಲು ಸಿಬಿಐಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು.

-ಎನ್.ಬಿ.

Leave a Reply

comments

Related Articles

error: