ಪ್ರಮುಖ ಸುದ್ದಿವಿದೇಶ

ಲಂಡನ್ ಅಪಾರ್ಟ್‍ಮೆಂಟ್ ಅಗ್ನಿ ದುರಂತ : ಸತ್ತವರ ಸಂಖ್ಯೆ 42ಕ್ಕೇರಿಕೆ

ಲಂಡನ್, ಜೂ.17 : ಬ್ರಿಟನ್ ರಾಜಧಾನಿಯಲ್ಲಿ 24 ಅಂತಸ್ತುಗಳ ಗ್ರೆನ್‍ಫೆಲ್ ಅಪಾರ್ಟ್‍ಮೆಂಟ್‍ನಲ್ಲಿ ಸಂಭವಿಸಿದ ಘೋರ ಬೆಂಕಿ ದುರಂತದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 42 ಎಂದು ಗೊತ್ತಾಗಿದೆ.  42 ಜನರ ಮೃತದೇಹಗಳು ಮಾತ್ರ ಪತ್ತೆಯಾಗಿದ್ದು,  ದುರ್ಘಟನೆಯಲ್ಲಿ ಸಾವನ್ನಪ್ಪಿರಬಹುದಾದ ಜನರ ಸರಿಯಾದ ಲೆಕ್ಕೆ ಇನ್ನೂ ಲಭ್ಯವಾಗಿಲ್ಲ.

ಘಟನೆಯಲ್ಲಿ ಅನೇಕರು ನಾಪತ್ತೆಯಾಗಿದ್ದು, ಗಾಯಾಳುಗಳ ಸ್ಥಿತಿ ಶೋಚನೀಯವಾಗಿದೆ. ಸಾವಿಗೀಡಾಗಿರುವವರ ಸಂಖ್ಯೆ 100ಕ್ಕೂ ಹೆಚ್ಚಿರಬಹುದು ಎಂದು ಆತಂಕ ವ್ಯಕ್ತವಾಗಿದೆ. ಬೆಂಕಿ ಸಂಭವಿಸಿದ ಎರಡು ದಿನಗಳ ನಂತರ ಬೆಂಕಿ ಮತ್ತು ದಟ್ಟ ಹೊಗೆಯನ್ನು ಸಂಪೂರ್ಣ ನಿಯಂತ್ರಿಸಲಾಗಿದ್ದರೂ, ಅಗ್ನಿಗಾಹುತಿಯಾದ ಮುಗಿಲೆತ್ತರದ ಕಟ್ಟಡಗಳ ಒಳಗೆ ಸುಟ್ಟು ಕರಕಲಾಗಿರುವ ಅಥವಾ ಉಸಿರುಗಟ್ಟಿ ಮೃತಪಟ್ಟಿರುವವರಿಗಾಗಿ ಶೋಧ ಮುಂದುವರಿದಿದೆ.

ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮುಖ್ಯಸ್ಥ ಸ್ಟುವರ್ಟ್ ಕ್ಯಾಂಡಿ ತಿಳಿಸಿದ್ದಾರೆ. ಬೆಂಕಿ ದುರಂತದಲ್ಲಿ ತೀವ್ರ ಗಾಯಗೊಂಡಿರುವವರಲ್ಲಿ 20ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿದೆ. ಡ್ರೋಣ್ ಮತ್ತು ಶ್ವಾನದಳದ ನೆರವಿನೊಂದಿಗೆ ಕಟ್ಟಡದಲ್ಲಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.  ಈ ದುರಂತದ ಬಗ್ಗೆ ತನಿಖೆ ಆರಂಭವಾಗಿದ್ದು, ಉದ್ದೇಶಪೂರ್ವಕವಾಗಿ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿದೆಯೇ ಎಂಬುದಕ್ಕೆ ಇನ್ನೂ ಯಾವುದೇ ಪುರಾವೆ ಲಭಿಸಿಲ್ಲ.

-ಎನ್.ಬಿ.

Leave a Reply

comments

Related Articles

error: