ಕರ್ನಾಟಕದೇಶಪ್ರಮುಖ ಸುದ್ದಿಮೈಸೂರು

ನಮ್ಮದೇ ನಾಡಹಬ್ಬದಲ್ಲಿ ಪರಭಾಷಿಕರ ಅಬ್ಬರ ಬೇಕೆ ಅಂತಾರೆ ಕನ್ನಡಪ್ರೇಮಿಗಳು: ಹಾಗೆನಿಲ್ಲ ಅಂದ್ರು ಅಧಿಕಾರಿಗಳು

ಕನ್ನಡಿಗರ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅತ್ಯಾಕರ್ಷಕ ಯುವ ದಸರಾ’ದಲ್ಲಿ ಕನ್ನಡಿಗರನ್ನೇ ಕಡೆಗಣಿಸಲಾಗಿದೆಯೇ? — ಹೀಗೊಂದು ಪ್ರಶ್ನೆ ಕನ್ನಡಾಭಿಮಾನಿಗಳನ್ನು ಕಾಡಲಾರಂಭಿಸಿದೆ.

ಕಳೆದ (ಅ.3) ರಂದು ಅನಾವರಣಗೊಂಡ ‘ಯುವ ದಸರಾ’ ಕಾರ್ಯಕ್ರಮಗಳಲ್ಲಿ ಕನ್ನಡಿಗರಿಗಿಂತ ಪರಭಾಷೆಯ ಕಲಾವಿದರಿಗೇ ಹೆಚ್ಚಿನ ಮನ್ನಣೆ ನೀಡಲಾಗಿದೆ. ಸರ್ಕಾರವೇ ಕನ್ನಡದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಎನ್ನುವ ದೂರು ಕೇಳಿ ಬಂದಿದೆ. ಕಳೆದ ದಸರಾದಂತೆ ಈ ಬಾರಿಯೂ ಯುವ ದಸರಾದಲ್ಲಿ ಅನ್ಯಭಾಷಿಕರನ್ನೇ ಮೆರೆಸಲಾಗುತ್ತಿದೆ. ನಮ್ಮಲ್ಲಿ ಪ್ರತಿಭಾವಂತ ಕಲಾವಿದರಿಲ್ಲವೇ? ಪರಭಾಷೆಯ ಹಾಡುಗಳನ್ನು ಕೇಳುವುದಕ್ಕಾಗಿಯೇ ಮೈಸೂರು ದಸರಾಗೆ ಕನ್ನಡಿಗರು ಆಗಮಿಸುವರೇ? ಎನ್ನುವುದು ಕನ್ನಡಿಗರ ಪ್ರಶ್ನೆ.

ರಾಜ್ಯದಲ್ಲಿಯೇ ಕನ್ನಡ ಹಾಗೂ ಕನ್ನಡಿಗರ ಬಗ್ಗೆ ತೋರುತ್ತಿರುವ ತಾತ್ಸಾರ ಮನೋಭಾವ ಪ್ರಶ್ನಿಸುವ ಪ್ರವೃತ್ರಿಯನ್ನು ಕನ್ನಡಿಗರು ಮೈಗೂಡಿಸಿಕೊಳ್ಳಬೇಕಾದ ಅನಿರ್ವಾಯತೆ ಎದುರಾಗಿದೆ. ಕನ್ನಡಿಗರ ತೆರಿಗೆ ಹಣದಲ್ಲಿ ಪರಭಾಷಿಕ ಕಲಾವಿದರನ್ನು ಅತಿಯಾಗಿ ಮೆರೆಸುವುದೆನ್ನಿತ್ತು? ಸ್ಥಳೀಯ ಕಲಾವಿದರಿಗೆ ಕನಿಷ್ಠ ಮೂಲಭೂತ ಸೌಕರ್ಯವನ್ನೂ ನೀಡದೆ ನಿರ್ಲಕ್ಷಿಸುವ ಅಧಿಕಾರಿಗಳು, ಪರಭಾಷೆ ಕಲಾವಿದರಿಗೆ ಪಂಚತಾರಾ ಹೋಟೆಲ್ ಗಳಲ್ಲಿ ವ್ಯವಸ್ಥೆ ಮಾಡುವರು. ಸ್ಥಳೀಯ ಕಲಾವಿದರಿಗೆ ಪರದೆಯ ಹಿಂದೆಯೇ ಸಾರ್ವಜನಿಕವಾಗಿ ಬಣ್ಣಹಚ್ಚಿ ಪೋಷಾಕು ಧರಿಸಲು ಆದೇಶಿಸುವರು. ಇದು ನಾಡು ನುಡಿಯ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ. ನಾಡಿನಲ್ಲಿ ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದ ಖ್ಯಾತ ಕಲಾವಿದರಿದ್ದಾರೆ. ಅವರ್ಯಾರಿಗೂ ಮುಖ್ಯವೇದಿಕೆಯಲ್ಲಿ ಕಾರ್ಯಕ್ರಮ ಪ್ರದರ್ಶಿಸುವ ಅವಕಾಶವನ್ನೇ ನೀಡಿಲ್ಲ. ಇತರೇ ವೇದಿಕೆಗಳಲ್ಲಿ ಸರಿಯಾದ ಬೆಳಕು ಮತ್ತು ಧ್ವನಿ ವರ್ಧಕಗಳ ವ್ಯವಸ್ಥೆಯೂ ಇಲ್ಲ. ಅಂತಹ ಕಡೆಯಲ್ಲಿ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಅಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಪರ ಊರುಗಳಿಂದ ಬಂದ ರಾಜ್ಯದ ಕಲಾವಿದರಿಗೆ ಸೂಕ್ತ ವಸತಿ ಇಲ್ಲ, ಊಟ ತಿಂಡಿ ವ್ಯವಸ್ಥೆ ಬಗ್ಗೆ ಹೇಳುವುದೇ ಬೇಡ. ದಸರಾ ಮಹೋತ್ಸವವು ಸ್ಥಳೀಯರಿಗೆ ಹಳಸಿದ ಅನ್ನ, ಅನ್ಯ ಭಾಷಿಕರಿಗೆ ಮೃಷ್ಟಾನ್ನ ಎನ್ನುವಂತಿದೆ ಎಂದು ಸ್ಥಳೀಯ ಕಲಾವಿದರೊಬ್ಬರ ಅಳಲು ತೊಡಿಕೊಂಡರು.

ಭಾರಿ ಸದ್ದಿನ ಧ್ವನಿವರ್ಧಕಗಳ ಆರ್ಭಟ, ಬಣ್ಣಬಣ್ಣದ ಬೆಳಕಿನ ರಂಗಿನ ಬೃಹತ್ ವೇದಿಕೆಯಲ್ಲಿ ಅನ್ಯ ಭಾಷಿಕರನ್ನು ಕುಣಿಸುವುದರ ಬದಲು, ದಸರಾ ಮಹೋತ್ಸವವನ್ನು ಸದುಪಯೋಗಪಡಿಸಿಕೊಂಡು ನಾಡು-ನುಡಿಯ ಸಂಸ್ಕೃತಿ, ಪರಂಪರೆ, ಆಹಾರ ಪದ್ಧತಿಯನ್ನು ಇಡೀ ವಿಶ್ವಕ್ಕೇ ಪರಿಚಯಿಸಲು ಲಭ್ಯವಿರುವ ಸುವರ್ಣವಕಾಶವನ್ನ ಸರ್ಕಾರ ಕೈಚೆಲ್ಲಿದೆ. ನಮ್ಮದೇ ನಾಡಹಬ್ಬದಲ್ಲಿ ಕನ್ನಡಕ್ಕಿಂತ ಅನ್ಯಭಾಷಾ ಕಲಾವಿದರು ಅಬ್ಬರಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎನ್ನುವುದು ಕನ್ನಡಾಭಿಮಾನಿಗಳ ನೋವಿನ ನುಡಿ.

ಹಾಗೆನಿಲ್ಲ ಅಂತಾರೆ ಅಧಿಕಾರಿಗಳು:

‘ಸಿಟಿಟುಡೆ’ಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ದಸರಾ ಉಪಸಮಿತಿ ಅಧಿಕಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್ ಅವರು, ”ಕನ್ನಡಿಗರನ್ನು ಕಡೆಗಣಿಸಬೇಕೆನ್ನುವ ಉದ್ದೇಶವಿಲ್ಲ. ‘ಯುವ ದಸರಾ’ ಅಂತಾರಾಷ್ಟ್ರೀಯ ಕಾರ್ಯಕ್ರಮ. ಪರಭಾಷಿಗರಷ್ಟೇ ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಲಾಗಿದೆ. ನಾಲ್ಕು ಗಂಟೆಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲ ಒಂದು ಗಂಟೆ ಯುವಸಂಭ್ರಮದಲ್ಲಿ ಆಯ್ಕೆಯಾದ ಸ್ಥಳೀಯ ಕಾಲೇಜಿನ ವಿದ್ಯಾರ್ಥಿಗಳು, ನಂತರ ರಾಜ್ಯದ ಬೆಂಗಳೂರು, ಮೈಸೂರು, ಹಾಸನ ಸೇರಿದಂತೆ ಹಲವಾರು ಜಿಲ್ಲೆಗಳ ಕಲಾವಿದರು ಕಾರ್ಯಕ್ರಮ ನೀಡುವರು. ಯುವ ದಸರಾವು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದ್ದು ಈ ಹಿನ್ನಲೆಯಲ್ಲಿ ರಾಷ್ಟ್ರಮಟ್ಟದ ಕಲಾವಿದರಿಗೂ ಅವಕಾಶ ನೀಡಲಾಗಿದೆ ಎಂದು ಸಿಟಿಟುಡೆಗೆ ಸ್ಪಷ್ಟನೆ ನೀಡಿದರು.

************************

– ರೇಖಾ ಪ್ರಕಾಶ್‍

 

Leave a Reply

comments

Related Articles

error: