ಮೈಸೂರು

ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು: ಡಾ.ಎಂ.ಎಸ್.ಮೂರ್ತಿ

ಮೈಸೂರಿನ ಜನತೆ ಕಲೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ. ಇಲ್ಲಿ ಹಿಂದಿನಿಂದ ಇಂದಿನವರೆಗೂ ಕಲೆಯನ್ನು ಯಾರೂ ತಾತ್ಸಾರ ಮಾಡಿಲ್ಲ. ಮೈಸೂರು ಭಾರತದಲ್ಲಿಯೇ ಕಲೆಗೆ ಪ್ರೋತ್ಸಾಹ ನೀಡುವ ಪ್ರಮುಖ ನಗರ ಎಂದು ಕರ್ನಾಟಕ ಲಲಿತಕಲಾ ಅಕಾಡಮಿಯ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಹೇಳಿದರು.

ಕಲಾಮಂದಿರದಲ್ಲಿ ದಸರಾ ಉತ್ಸವದ ಅಂಗವಾಗಿ ದಸರಾ ಉಪ ಸಮಿತಿ ಆಯೋಜಿಸಿದ್ದ ಹಿರಿಯ ಕಲಾವಿದರಿಗೆ ಸನ್ಮಾನ ಮತ್ತು ಶಿಲ್ಪಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ದಸರಾದಲ್ಲಿ ಶಿಲ್ಪಕಲೆ, ಮರಕೆತ್ತನೆಯಂತಹ ಕಲೆಗಳಿಗೆ ಅವಕಾಶ ಮಾಡಿಕೊಟ್ಟಿರುವುದು ಸಂತೋಷದ ವಿಷಯ. ಈ ಕಲೆಗಳು ಇಂದು ಅವನತಿಯತ್ತ ಸಾಗುತ್ತಿದ್ದು ಉಳಿಸಿಕೊಳ್ಳುವ ಕೆಲಸವಾಗಬೇಕಿದೆ ಎಂದರು. ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ನಡೆದರೆ ಅವರು ಇನ್ನೂ ಹೆಚ್ಚಿನ ರೀತಿಯಲ್ಲಿ ಕ್ರೀಯಾಶೀಲರಾಗಿರುತ್ತಾರೆ. ಅದಕ್ಕಾಗಿ ಕಲಾವಿದರಿಗೆ ಎಲ್ಲ ರೀತಿಯ ಅಗತ್ಯಗಳನ್ನು ಒದಗಿಸಿಕೊಡಬೇಕು ಎಂದು ತಿಳಿಸಿದರು.

ದಸರಾ ಉಪ ಸಮಿತಿಯ ಡಾ.ಎಂ.ಮಹೇಶ್ ಮಾತನಾಡಿ ಶಿಲ್ಪಕಲೆಗೆ ಇದೇ ಮೊದಲಬಾರಿಗೆ ದಸರಾ ಉತ್ಸವದಲ್ಲಿ ಆದ್ಯತೆ ನೀಡಲಾಗಿದ್ದು, ಇಲ್ಲಿನ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕಲಾವಿದರು ಭಾಗವಹಿಸುವಂತೆ ಅವಕಾಶ ಮಾಡಿಕೊಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು. ಶಿಲ್ಪಕಲೆ, ಚಿತ್ರಕಲೆ, ಛಾಯಾಚಿತ್ರ, ರಂಗೋಲಿಸ್ಪರ್ಧೆ, ಕರಕುಶಲ ಸ್ಪರ್ಧೆ, ಅನ್ವಯಿಕ ಕಲೆಗಳಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ಮತ್ತು ನಗದು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಕಲಾ ಮಂದಿರದ ಕಾರ್ಯದರ್ಶಿ ಎಚ್.ಚೆನ್ನಪ್ಪ, ಕಾರ್ಯಾಧ್ಯಕ್ಷ ಬಸವರಾಜ ಮುಸವಳಗಿ, ಜಂಬುಕೇಶ್ವರ, ಗಿರಿಜಾ ಗೀತಾಂಜಲಿ, ರಾಮಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: