ಪ್ರಮುಖ ಸುದ್ದಿಮೈಸೂರು

ಕೃಷ್ಣರಾಜ ಸಾಗರಕ್ಕೆ ಭೇಟಿ ನೀಡಿದ ತಜ್ಞರ ತಂಡ: ಶೀಘ್ರದಲ್ಲಿಯೇ ಸುಪ್ರೀಂಕೋರ್ಟ್ ಗೆ ವರದಿ

ಕಾವೇರಿ ನೀರಿನ ಹಂಚಿಕೆ ಕುರಿತಂತೆ ಕೇಂದ್ರ ಸರ್ಕಾರ ತಜ್ಞರ ತಂಡವನ್ನು ರಾಜ್ಯಕ್ಕೆ ಕಳುಹಿಸಿದ್ದು ತಜ್ಞರು ವಾಸ್ತವಾಂಶವನ್ನು ಕಲೆ ಹಾಕುತ್ತಿದ್ದಾರೆ ಶನಿವಾರ ಬೆಳಿಗ್ಗೆ ಕೃಷ್ಣರಾಜ ಸಾಗರಕ್ಕೆ ಭೇಟಿ ನೀಡಿದ ತಂಡಕ್ಕೆ ಸುತ್ತಮುತ್ತಲಿನ ಒಣಗಿದ ಫೈರುಗಳು ಸ್ವಾಗತ ಕೋರಿದ್ದು , ವಸ್ತು ಸ್ಥಿತಿಯ ಅರಿವಾಗಿದೆ. ತಂಡವು ಅಲ್ಲಿನ ರೈತರಿಂದ ಮಾಹಿತಿಯನ್ನು ಕಲೆ ಹಾಕಿದೆ.

ಶನಿವಾರ ಬೆಳಿಗ್ಗೆ ಎರಡು ಹೆಕಾಪ್ಟರ್ ಗಳಲ್ಲಿ ಕೃಷ್ಣರಾಜ ಸಾಗರಕ್ಕೆ ಬಂದಿಳಿದ 8 ಜನರ ತಂಡ ಜಲಾಶಯದಲ್ಲಿ ಎಷ್ಟು ನೀರು ಸಂಗ್ರಹವಾಗಿದೆ ಎನ್ನುವುದನ್ನು ತಿಳಿದುಕೊಂಡಿದೆ. ಕೆಆರ್ ಎಸ್ ಸುತ್ತಮುತ್ತಲಿನ ರೈತರ ಬೆಳೆ ನೀರಿಲ್ಲದೆ ಯಾವ ರೀತಿ ಹಾನಿಗೊಳಗಾಗಿದೆ ಎಂಬುದನ್ನು ಪರಿಶೀಲಿಸಿದೆ. ಅಷ್ಟೇ ಅಲ್ಲದೇ ಕಳೆದ ಐದು ವರ್ಷಗಳಲ್ಲಿ ಜಲಾಶಯದಲ್ಲಿ ಎಷ್ಟು ನೀರು ಸಂಗ್ರಹವಾಗುತ್ತಿತ್ತು. ಎಷ್ಟು ನೀರು ಕೃಷಿಗೆ ಉಪಯೋಗವಾಗುತ್ತಿತ್ತು. ಎಷ್ಟು ನೀರು ಇನ್ನಿತರ ಕೆಲಸಗಳಿಗೆ ವ್ಯಯವಾಗುತ್ತಿತ್ತು ಎಂಬ ಮಾಹಿತಿಯನ್ನು ಸಂಗ್ರಹಿಸಿದೆ.

ಜಲಾಶಯದಲ್ಲಿ ಯಾವಾಗ ನೀರು ತುಂಬಿಕೊಂಡಿರುತ್ತಿತ್ತು. ಈ ವರ್ಷ ಎಷ್ಟು ಮಳೆಯಾಗಿದೆ, ಎಷ್ಟು ನೀರು ಸಂಗ್ರಹವಾಗಿದೆ, ಇಲ್ಲಿನ ಜನರಿಗೆ ಎಷ್ಟು ನೀರಿನ ಅವಶ್ಯಕತೆ ಇದೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡ ತಂಡ ಆ ಪ್ರದೇಶಗಳಲ್ಲಿ  ಹೆಲಿಕಾಪ್ಟರ್ ಮೂಲಕವೂ ವೀಕ್ಷಣೆ ನಡೆಸಿದೆ.

ತಜ್ಞರ ತಂಡದಲ್ಲಿದ್ದ ಕೇಂದ್ರ ಜಲ ಆಯೋಗದ ಅಧ್ಯಕ್ಷ  ಜಿ.ಎಸ್.ಝಾ ಮಾತನಾಡಿ ಎರಡು ದಿನ ಕರ್ನಾಟಕದಲ್ಲಿ ಪ್ರವಾಸ ನಡೆಸುತ್ತಿದ್ದೇವೆ. ಕಾವೇರಿ ನದಿ ತೀರದ ಸಂಪೂರ್ಣ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇವೆ. ರೈತರ ಜೊತೆಯೂ ಮಾತನಾಡಿದ್ದೇವೆ. ಅವರು ಕೃಷಿ ಭೂಮಿಯಲ್ಲಿ ಬೆಳೆದ ಫಸಲಿನ ಮಾದರಿಯನ್ನು ಸಂಗ್ರಹಿಸಿದ್ದೇವೆ. ಈ ಪ್ರದೇಶದ ಎಲ್ಲ ಶಾಸಕರು, ಸಂಸದರನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದೇವೆ. ಇಲ್ಲಿನ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ ಶೀಘ್ರದಲ್ಲಿಯೇ ಸುಪ್ರೀಂಕೋರ್ಟ್ ಗೆ ವರದಿ ನೀಡಲಿದ್ದೇವೆ ಎಂದರು.

ಈ ಸಂದರ್ಭ ಕೇಂದ್ರ ಜಲ ಆಯೋಗದ ಸದಸ್ಯ ಹೊಸದಿಲ್ಲಿಯ ಎಸ್.ಮಸೂದ್ ಹುಸೇನ್, ಹೈದ್ರಾಬಾದ್ ನ ಕೆ.ಆರ್.ಗುಪ್ತಾ, ಕೇರಳದ ಮುಖ್ಯ ಇಂಜಿನಿಯರ್ ಮಹಾನುದೇವನ್, ತಮಿಳುನಾಡಿನ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಕಾವೇರಿ ತಾಂತ್ರಿಕ ಘಟಕದ ಆರ್.ಸುಬ್ರಹ್ಮಣ್ಯನ್, ಪಾಂಡಿಚೇರಿಯ ಮುಖ್ಯ ಇಂಜಿನಿಯರ್ ಪಿ.ಸ್ವಾಮಿನಾಥನ್, ಅಧೀಕ್ಷಕ ಅಭಿಯಂತರ ಷಣ್ಮುಖ ಸುಂದರಂ, ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮೈಸೂರಿನ ಕಾವೇರಿ ನಿಗಮ ಮಂಡಲಿಯ ವ್ಯವಸ್ಥಾಪಕ ಚಿಕ್ಕರಾಯಪ್ಪ ಉಪಸ್ಥಿತರಿದ್ದರು. ಕೃಷ್ಣರಾಜ ಸಾಗರ ವೀಕ್ಷಿಸಿದ ಬಳಿಕ ತಂಡ ಕೆ.ಆರ್.ಪೇಟೆಯತ್ತ ಪಯಣ ಬೆಳೆಸಿದೆ.

ಶುಕ್ರವಾರ ಸಂಜೆ  ಇದೇ ತಂಡ ಮಂಡ್ಯಕ್ಕೆ ಭೇಟಿ ನೀಡಿದ್ದು  ಅಲ್ಲಿನ ರೈತರನ್ನು ಭೇಟಿಯಾಗಿ ಅವರ ಕೃಷಿ ಪ್ರದೇಶಗಳನ್ನು ವೀಕ್ಷಿಸಿ ಒಣಗಿ ನಿಂತ ಭತ್ತದ ಪೈರು ಹಾಗೂ ಕಬ್ಬಿನ ಮಾದರಿಯನ್ನು ಸಂಗ್ರಹಿಸಿತ್ತು. ಮಂಡ್ದ ಮದ್ದೂರು, ಪಣ್ಣೇದೊಡ್ಡಿ, ಹರಳಕೆರೆ, ದೊಡ್ಡರಸಿನಕೆರೆ, ಮಳವಳ್ಳಿ ಗ್ರಾಮಗಳಿಗೆ ತೆರಳಿ ಅಲ್ಲಿನ ರೈತರ ಕೃಷಿಭೂಮಿಯನ್ನು ಪರಿಶೀಲಿಸಿತ್ತು. ಸ್ಥಳಕ್ಕಾಗಮಿಸಿದ ತಜ್ಞರಲ್ಲಿ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದರು.

Leave a Reply

comments

Related Articles

error: