ಮೈಸೂರು

ದಸರಾ: ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ವೀರಭದ್ರ ನೃತ್ಯ; ಕರ್ಣಾನಂದ ನೀಡಿದ ವೀಣಾವಾದನ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ವಿವಿಧ ವೇದಿಕೆಗಳಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮೈಸೂರಿಗರಿಗೆ ಕಲೆಯ ರಸದೌತಣವನ್ನು ನೀಡುತ್ತಿವೆ.

ನಗರದ ಜಗನ್ಮೋಹನ ಅರಮನೆಯಲ್ಲಿ ಜರುಗಿದ (ಅ.7) ಏಳನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜಸ್ಥಾನದ ಸಾಂಸ್ಕೃತಿಕ ಕಲೆಯಾದ ಚಕ್ರನೃತ್ಯ, ಮೈಸೂರಿನ ಕೋಡಿ ನಾರಾಯಣಸ್ವಾಮಿ ತಂಡದ ವೀರಭದ್ರನ ಕುಣಿತ, ವಿದ್ವಾನ್ ಹೆಗ್ಗಾರ ಅನಂತಸುಬ್ರಾಯ್ ಹೆಗಡೆಯವರ ಭಕ್ತಿಗೀತ ಗಾಯನ ಹಾಗೂ ವಿದ್ವಾನ್ ಟಿ.ಎಂ. ಶಂಕರ್ ಅವರ ವೀಣಾವಾದನವು ಪ್ರೇಕ್ಷಕರನ್ನು ಮನೋರಂಜನೆಯ ಅಲೆಯಲ್ಲಿ ತೇಲಿಸಿತು.

ರಾಜಸ್ಥಾನದ ಜಾನಪದ ನೃತ್ಯ ಚಕ್ರಿಯ ಹಿಮ್ಮೇಳವೇ ಆ ನೃತ್ಯದ ಮುಖ್ಯ ಆಕರ್ಷಣೆ. ಡೊಲಕ್, ತಾಳಗಳ ಮೇಳಕ್ಕೆ ಕಲಾವಿದರು ಹೆಜ್ಜೆ ಹಾಕಿದರು. ಮೈಸೂರಿನ ಕೋಡಿ ನಾರಾಯಣಸ್ವಾಮಿ ತಂಡದ ವೀರಭದ್ರನ ಕುಣಿತ ಅತ್ಯಾಕರ್ಷಣೀಯವಾಗಿತ್ತು. ತಲೆಯ ಮೇಲೆ ಕಿರೀಟ, ಕಾಲಿಗೆ ಗೆಜ್ಜೆ, ಕೈಯಲ್ಲಿ ಕತ್ತಿ ಕಣ್ಣುಗಳಲ್ಲಿ ವೀರಾವೇಷ, ಮಾತಿನಲ್ಲಿ ದಕ್ಷಬ್ರಹ್ಮನ ನಿಂದನೆ ನುಡಿಗಳು ವೀರಭದ್ರನ ಕುಣಿತದ ವಸ್ತುವಿಷಯ. ಡೊಳ್ಳು, ಹಲಗೆ, ತಾಳಗಳ ಶಬ್ದಕ್ಕೆ ಕಲಾವಿದರು ರೋಷಭರಿತರಾಗಿ ನರ್ತಿಸಿದರು. ಗಾಳಿಯಲ್ಲಿ ತೇಲಿ ಬರುವ ಕಾಯಿಗಳನ್ನು ಕತ್ತಿಯಿಂದ ಒಡೆದು ಚೂರು ಚೂರು ಮಾಡಿ ಶಿಳ್ಳೆ ಚಪ್ಪಾಳೆ ಗಿಟ್ಟಿಸಿದರು, ತಲೆಯಿಂದ ನಿಂಬೆಹಣ್ಣನ್ನು ಜಜ್ಜಿ ವೀರಾವೇಷ ಮೆರೆದು ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ವಿದ್ವಾನ್ ಹೆಗ್ಗಾರ ಅನಂತಸುಬ್ರಾಯ್ ಹೆಗಡೆ ಹಾಗೂ ವಿದ್ವಾನ್ ಟಿ.ಎಂ.ಶಂಕರ್ ಮತ್ತು ತಂಡದವರ ಭಕ್ತಿ ಸಂಗೀತ ಮತ್ತು ವೀಣಾವಾದನವು ಪ್ರೇಕ್ಷಕರಿಗೆ ಕರ್ಣಾನಂದ ನೀಡಿದವು. ದಸರಾ ಉಪಸಮಿತಿಯ ವಿಶೇಷಾಧಿಕಾರಿ ಲೋಕೇಶ್ ಎಂ.ಎಸ್. ಅವರು ಕಲಾವಿದರನ್ನು ಸನ್ಮಾನಿಸಿ ಪ್ರಮಾಣ ಪತ್ರ ವಿತರಿಸಿದರು. ಓಹಿಲಾ ನಿರೂಪಿಸಿದರು.

Leave a Reply

comments

Related Articles

error: