ದೇಶಪ್ರಮುಖ ಸುದ್ದಿ

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರ : ಬಿಜೆಪಿ ಸಂಸದೀಯ ಪಕ್ಷದ ಸಭೆ

ನವದೆಹಲಿ, ಜೂ.19 : ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಎನ್‍ಡಿಎ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಇಂದು ಬಿಜೆಪಿ ಸಂಸದೀಯ ಪಕ್ಷದ ಸಭೆ ಕರೆಯಲಾಗಿದೆ.

ಬಿಜೆಪಿ ತನ್ನ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದ ಬಳಿಕವೇ ತಮ್ಮ ಕಡೆಯಿಂದ ಅಂತಿಮ ನಿರ್ಧಾರ ಕೈಗೊಳ್ಳಲು ಪ್ರತಿಪಕ್ಷಗಳು ಕಾದು ಕುಳಿತಿವೆ. ಇಂದು ದೆಹಲಿಯಲ್ಲಿ ಬಿಜೆಪಿಯ ಸಂಸದರು ಮತ್ತು ಶಾಸಕರು ಸಭೆ ಸೇರುತ್ತಿದ್ದಾರೆ. ಸಭೆಯಲ್ಲಿ ರಾಷ್ಟ್ರಪತಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ. ಅಷ್ಟೇ ಅಲ್ಲ ಅಭ್ಯರ್ಥಿ ಹೆಸರು ಫೈನಲ್ ಆದ ಬಳಿಕ ಬಿಜೆಪಿಯು ವಿಪಕ್ಷಗಳ ಜೊತೆಗೂ ಸಮಾಲೋಚನೆ ನಡೆಸಲಿದೆ.

ಈಗಾಗಲೇ ಬಿಜೆಪಿಯು ಸಚಿವ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಹಾಗೂ ವೆಂಕಯ್ಯ ನಾಯ್ಡು ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿ ರಚಿಸಿದೆ. ಇದರ ಜೊತೆಗೆ ಎಐಎಡಿಎಂಕೆ, ಟಿಡಿಪಿ, ಎಜೆಪಿ ಪಕ್ಷಗಳೂ ಸಹ ಪ್ರಧಾನಿ ಮೋದಿ ಅವರ ನಿರ್ಧಾರವನ್ನೇ ಬೆಂಬಲಿಸುವುದಾಗಿ ಹೇಳಿವೆ. ಹೀಗಾಗಿ ಬಿಜೆಪಿಯ ತ್ರಿಸದಸ್ಯ ಸಮಿತಿಯು ಎಲ್ಲ ದೃಷ್ಟಿಕೋನಗಳಿಂದಲೂ ಚಿಂತನೆ ನಡೆಸಿ ಈಗಾಗಲೇ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಜೂನ್ 23 ರಂದು ಎನ್‍ಡಿಎ ಅಭ್ಯರ್ಥಿಯು ರಾಷ್ಟ್ರಪತಿ ಚುನಾವಣೆಗಾಗಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದ್ದು, ಇಂದಿನ ಬಿಜೆಪಿ ಸಂಸದೀಯ ಪಕ್ಷದ ಸಭೆ ಔಪಚಾರಿಕವಷ್ಟೇ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

-ಎನ್.ಬಿ.

Leave a Reply

comments

Related Articles

error: