ಮೈಸೂರು

ಆಯುಧಪೂಜೆ, ವಿಜಯದಶಮಿ ಸಡಗರ: ವಸ್ತುಗಳ ಬೆಲೆ ಗಗನಕ್ಕೆ

ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ವಿಶಿಷ್ಟ ವಿಭಿನ್ನ. ಅರಮನೆಯಲ್ಲಿ ಸಾಂಪ್ರದಾಯಿಕ ಆಚರಣೆಗಳು ರಾಜ ಯದುವೀರ ಕೃಷ್ಣದತ್ತ ನರಸಿಂಹರಾಜ ಒಡೆಯರ ನೇತೃತ್ವದಲ್ಲಿ ನಿರ್ವಿಘ್ನವಾಗಿ ಜರುಗುತ್ತಿವೆ. ನವರಾತ್ರಿಯ ಮುಖ್ಯ ಘಟ್ಟವಾದ ಆಯುಧ ಪೂಜಾ ಹಾಗೂ ವಿಜಯದಶಮಿ. ಅ.10 ಮತ್ತು 11 ರಂದು ನಡೆಯಲಿದ್ದು, ಈ ನಿಟ್ಟಿನಲ್ಲಿ ಶ್ರೀಸಾಮಾನ್ಯರು ಭರದ ಸಿದ್ಧತೆ ನಡೆಸಿದ್ದಾರೆ.

ಕಳೆದೊಂದು ತಿಂಗಳಿನಿಂದ ನಡೆದ ಕಾವೇರಿ ಪ್ರತಿಭಟನೆಗಳು ನಾಡಹಬ್ಬದ ಹಿನ್ನಲೆಯಲ್ಲಿ ತಾತ್ಕಾಲಿಕ ವಿರಾಮ ಘೋಷಿಸಿದ್ದು ಸಾರ್ವಜನಿಕರು ಹಬ್ಬದ ಭರ್ಜರಿ ತಯಾರಿಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ನಗರದ ಎಂ.ಜಿ. ರಸ್ತೆಯ ದೊಡ್ಡ ಮಾರುಕಟ್ಟೆಯಲ್ಲಿ ಇಂದು ತರಕಾರಿ, ಹೂವು, ಹಣ್ಣು ಮತ್ತು ಕುಂಬಳಕಾಯಿ ವ್ಯಾಪಾರ ಜೋರಾಗಿಯೇ ನಡೆದಿತ್ತು. ಹಬ್ಬದ ನಿಮಿತ್ತ ಕಳೆದ ವಾರಕ್ಕಿಂತ ಈ ವಾರ ಎಲ್ಲಾ ವಸ್ತುಗಳ ಬೆಲೆಯೂ ಗಗನಕ್ಕೇರಿವೆ.

whatsapp-image-2016-10-08-at-11-04-10-am

ನಿನ್ನೆ ಮೊನ್ನೆ ಒಂದು ಮಾರು ಸೇವಂತಿ ಹೂ ಕೇವಲ 10 ರಿಂದ 20 ರೂ.ಗಳಿಗೆ ಸಿಗುತ್ತಿತ್ತು, ಇಂದು 70 ರಿಂದ 80 ರೂ ತಲುಪಿದೆ. ನಾಳೆ ನೂರು ರೂಪಾಯಿ ದಾಟಬಹುದು ಎಂದು ಹೂವಿನ ವ್ಯಾಪಾರಿ ಮಾದೇವ ನಾಯ್ಕ್ ‘ಸಿಟಿಟುಡೆ’ಗೆ ತಿಳಿಸಿದರು. ನಂಜನಗೂಡಿನ ಮೆಲ್ಲಳ್ಳಿಯಿಂದ ಹೂ ಖರೀದಿ ಮಾಡಿ ತರಲಾಗಿದೆ. ಹೊಸ ಹೂವಿಗಿಂತ ಹಳೆಯದಕ್ಕೆ ಸ್ವಲ್ಪ ಕಮ್ಮಿ ರೇಟ್.  ವ್ಯಾಪಾರವು ಕಳೆದ ವರ್ಷಕ್ಕಿಂತ ಈ ವರ್ಷ ಡಲ್ ಆಗಿದೆ. ನೋಡೋಣ ನಾಳೆ ಮತ್ತು ನಾಡಿದ್ದು ಉತ್ತಮ ವ್ಯಾಪಾರವಾಗುವ ನಿರೀಕ್ಷೆ ಇದೆ ಎನ್ನುವ ಆಶಾವಾದ ವ್ಯಕ್ತಪಡಿಸಿದರು.

“ಬಾಳೆ ಎಲೆಯನ್ನು ಹಬ್ಬ ಹಾಗೂ ಶುಭ ಸಂದರ್ಭದಲ್ಲಿ ಮಾತ್ರ ಖರೀದಿ ಮಾಡುತ್ತಾರೆ. ಬಾಳೆ ಎಲೆಯನ್ನು ಹೆಚ್ಚು ದಿನ ಸಂಗ್ರಹಿಸಿ ಇಡಲಾಗುವುದಿಲ್ಲ. ಇನ್ನೆರಡು ದಿನಗಳಲ್ಲಿ ವ್ಯಾಪಾರವಾದರೆ ಹಾಕಿದ ಬಂಡವಾಳ ಬಂದಂತೆ ಇಲ್ಲವೆಂದರೇ ನಷ್ಟವಾಗಲಿದೆ” ಎನ್ನುತ್ತಾರೆ ಬಾಳೆ ಎಲೆ ಮಾರುತ್ತಿರುವ ರೈತ ಮಹಿಳೆ ನಂಜನಗೂಡಿನ ದೇವರ್ಸಿನಳ್ಳಿಯ ಲಕ್ಷ್ಮಿದೇವಿ. “ಬಂದ ಹಣದಲ್ಲಿ ಕೂಲಿ, ಸಾಗಣೆ ವೆಚ್ಚ ಕಳೆದು ಉಳಿಯುವುದು ಸ್ವಲ್ಪ ಲಾಭ. ಮೊದಲೆಲ್ಲ ದಿನಕ್ಕೆ ಒಂದರಿಂದ ಎರಡು ಸಾವಿರ ರೂಪಾಯಿವರೆಗೂ ವ್ಯಾಪಾರವಾಗುತ್ತಿತ್ತು, ಇಂದು ಇನ್ನೂರು ರೂಪಾಯಿ ವ್ಯಾಪಾರವೂ ಆಗಿಲ್ಲ” ಎಂಬುದು ಇವರ ಅಳಲು.

whatsapp-image-2016-10-08-at-11-04-08-am

ದೃಷ್ಟಿ ತೆಗೆಯಲು ಬಳಸುವ ಬೂದಗುಂಬಳಕಾಯಿ ನೆರೆಯ ತಮಿಳುನಾಡಿನಿಂದ ಬರುತ್ತಿದ್ದು ನಿತ್ಯ ಕೆ.ಜಿ.ಗೆ 7 ರಿಂದ 8 ರೂಪಾಯಿ. ಇಂದಿನಿಂದ ಇದರ ಬೆಲೆ 80 ರಿಂದ 100 ರೂಪಾಯಿ ಆಗುವ ನಿರೀಕ್ಷೆ ಇದೆ. ಆಯುಧ ಪೂಜೆಗೆ ಬೂದಗುಂಬಳಕಾಯಿ ಬೇಕೇ ಬೇಕು. ಈ ಸಮಯದಲ್ಲಿಯೇ ಸ್ವಲ್ಪ ವ್ಯಾಪಾರ ಜೋರು. ಬೆಲೆಯೂ ದುಪ್ಪಟ್ಟಾಗಲಿದೆ. ಈ ವರ್ಷ ಮಾಲು ಕಮ್ಮಿ. ಆದ್ದರಿಂದ ಬೆಲೆಯೂ ಸ್ವಲ್ಪ ಜಾಸ್ತಿಯೇ ಆಗುವುದು ಎಂದು ಉದ್ಬೂರು ಸಿದ್ದರಾಜು ತಿಳಿಸಿದರು.

ರೈಲ್ವೆ ನಿಲ್ದಾಣದ ಡೆಪ್ಯೂಟಿ ಮ್ಯಾನೇಜರ್ ರಮೇಶ್ ಪ್ರತಿಕ್ರಿಯಿಸಿ “ಫಸಲು ಹೊಸದಾಗಿ ಬರುವುದರಿಂದ ಗೌರಿ ಗಣೇಶ ಹಬ್ಬಕ್ಕೆ ಹೋಲಿಸಿದರೆ ನಾಡಹಬ್ಬ ದಸರಾದಲ್ಲಿ ಹೂವು ಹಣ್ಣು ತುಸು ಅಗ್ಗ” ಎಂದರು.

ನಾಡಹಬ್ಬ ಮೈಸೂರು ದಸರಾ ಪಾಡ್ಯದಿಂದ ಹಿಡಿದು ದಶಮಿಯವರೆಗೂ ಪ್ರತಿ ದಿನವೂ ವಿಶೇಷವೇ. ಒಂದೊಂದು ದಿನ ಒಂದೊಂದು ಅಧಿದೇವತೆಯ ಆರಾಧಿಸಲು ಭರ್ಜರಿ ಸಿದ್ಧತೆ ನಡೆದಿದ್ದು, ಬೆಲೆ ಹೆಚ್ಚಳಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ವರ್ಷಕ್ಕೊಮ್ಮೆ ಬರುವ ದಸರಾ ನಾಡಹಬ್ಬವನ್ನು ವೈಭವಯುತವಾಗಿ ಆಚರಿಸಲೇಬೇಕು. ಯಾವುದಕ್ಕೂ ಕೊರತೆಯಾಗಬಾರದು ಎನ್ನುವುದು ಗ್ರಾಹಕರ ಅನಿಸಿಕೆಯಾಗಿತ್ತು.

  • ರೇಖಾ ಪ್ರಕಾಶ್ .ಕೆ.ಎಂ.

Leave a Reply

comments

Related Articles

error: