ಪ್ರಮುಖ ಸುದ್ದಿ

ರೈತರ ಸಾಲಮನ್ನಾ ಮಾಡಿದರೆ ಬ್ಯಾಂಕುಗಳು ದಿವಾಳಿ: ಉರ್ಜಿತ್ ಪಟೇಲ್ ಎಚ್ಚರಿಕೆ

ಪ್ರಮುಖ ಸುದ್ದಿ, ಬೆಂಗಳೂರು, ಜೂ.19: ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾ ಮಾಡಿದರೆ ಬ್ಯಾಂಕ್‌ಗಳು ಮುಂದೊಂದು ದಿನ ದಿವಾಳಿಯಾಗುತ್ತವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಚ್ಚರಿಸಿದೆ.

ಈ ಸಂಬಂಧ ರಿಸರ್ವ್ ಬ್ಯಾಂಕ್‌ನ ಆರ್‌ಬಿಐನ ಉರ್ಜಿತ್ ಪಟೇಲ್ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಬ್ಯಾಂಕ್‌ಗಳ ಸಾಲಮನ್ನಾದಿಂದ ಕೆಟ್ಟ ಸಂಪ್ರದಾಯಗಳಿಗೆ ನಾಂದಿ ಹಾಡಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರಗಳು ಜನಪ್ರಿಯತೆಯ ಹಠಕ್ಕೆ ಬಿದ್ದು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಘೋಷಣೆ ಮಾಡಬಹುದು. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬಹುದು. ಆದರೆ ಸರ್ಕಾರಗಳು ನಿಗದಿತ ಸಮಯಕ್ಕೆ ಬ್ಯಾಂಕ್‌ಗಳಿಗೆ ಸಾಲಮನ್ನಾ  ಹಣ ಪಾವತಿಸದಿರುವುದು ಆರ್ಥಿಕ ಹಿನ್ನಡೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ನಿಗದಿತ ಸಮಯಕ್ಕೆ ಸರಿಯಾಗಿ ಹಣ ಪಾವತಿಸಿದರೆ ಬ್ಯಾಂಕ್‌ಗಳು ಚೇತರಿಸಿಕೊಳ್ಳಬಹುದು. ಇಲ್ಲದಿದ್ದರೆ  ಆರ್ಥಿಕ ವಹಿವಾಟಿನ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಪರಿಣಾಮ ಬ್ಯಾಂಕ್‌ಗಳು ಮುಚ್ಚಿ ಹೋಗುವ ಸಂದರ್ಭವೂ ಬಂದೊದಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಿಂತ ಹೆಚ್ಚಾಗಿ ಸಹಕಾರಿ ಸಂಘಗಳಲ್ಲೇ ಹೆಚ್ಚಿನ ಸಾಲ ಪಡೆದಿರುತ್ತಾರೆ. ಸಾಲಮನ್ನಾ ಘೋಷಣೆ ಮಾಡಿದ ತಕ್ಷಣವೇ ಸರ್ಕಾರ ಹಣ ಹಿಂದಿರುಗಿಸಿದರೆ ಬ್ಯಾಂಕ್‌ಗಳು ನಷ್ಟಕ್ಕೆ ಸಿಲುಕುವ ಅಪಾಯ ತಪ್ಪುತ್ತದೆ. ಆದರೆ ಕೆಲವು ಬಾರಿ ಒಂದು ವರ್ಷವಾದರೂ ಹಣ ಬರುವುದಿಲ್ಲ. ಇದರಿಂದ ಬ್ಯಾಂಕ್‌ಗಳು ಪುನಃ ರೈತರಿಗೆ ಸಾಲ ಕೊಡದ ದುಸ್ಥಿತಿಗೆ ಬರುತ್ತವೆ ಎಂದು ಉರ್ಜಿತ್ ಪಟೇಲ್ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಜನಪ್ರಿಯತೆಗೆ ರಾಜ್ಯ ಸರ್ಕಾರಗಳು ಸಾಲಮನ್ನಾ ಘೋಷಣೆ ಮಾಡಬಹುದು. ಒಂದು ವೇಳೆ ಒಂದು ವರ್ಷದೊಳಗೆ ಸರ್ಕಾರ ಹಣ ನೀಡದಿದ್ದರೆ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಇದನ್ನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗಮನಕ್ಕೆ ತಂದಿರುವುದಾಗಿ ಹೇಳಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: