ದೇಶಪ್ರಮುಖ ಸುದ್ದಿ

ರಾಷ್ಟ್ರಪತಿ ಚುನಾವಣೆ : ವಿಪಕ್ಷಗಳ ವತಿಯಿಂದ ಡಾ.ಅಂಬೇಡ್ಕರ್ ಮೊಮ್ಮಗ ಅಭ್ಯರ್ಥಿಯಾಗುವ ಸಾಧ್ಯತೆ

ನವದೆಹಲಿ, ಜೂ.20 : ಬಿಜೆಪಿ ವತಿಯಿಂದ ಎನ್‍ಡಿಎ ಅಭ್ಯರ್ಥಿಯಾಗಿ ರಾಮ್‍ ನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಎಂದು ನಿನ್ನೆ ಘೋಷಣೆ ಮಾಡಲಾಗಿದ್ದು, ಪ್ರತಿಪಕ್ಷಗಳ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ನಿನ್ನೆ ಯಾರೂ ನಿರೀಕ್ಷೆ ಮಾಡದ ಹೆಸರನ್ನು ಪ್ರಕಟಿಸುವ ಮೂಲಕ ದೇಶದ ಜನರಿಗೆ ಬಿಜೆಪಿ ಅಚ್ಚರಿ ನೀಡಿತ್ತು. ಅದರಂತ ಈಗ ಪ್ರತಿಪಕ್ಷಗಳ ವತಿಯಿಂದ ಯಾರನ್ನು ಕಣಕ್ಕಿಳಿಸಿದರೆ ಹೆಚ್ಚು ಅನುಕೂಲ ಎಂಬ ಬಗ್ಗೆ ಚರ್ಚೆ ನಡೆದಿದ್ದು ಡಾ. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ಕಣಕ್ಕಿಳಿಸಿದರೆ ಹೆಚ್ಚು ಅನುಕೂಲ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

ಎನ್‍ಡಿಎ ಈಗಾಗಲೇ ತನ್ನ ಅಭ್ಯರ್ಥಿಯಾಗಿ ರಾಮ್‍ನಾಥ್ ಕೋವಿಂದ್ ಅವರ ಹೆಸರು ಘೋಷಣೆ ಮಾಡಿದೆ. ಇವರು ದಲಿತ ಸಮುದಾಯದಿಂದ ಬಂದವರಾಗಿದ್ದು, ಪ್ರತಿಪಕ್ಷಗಳೂ ಈ ಹೆಸರಿಗೆ ಬೆಂಬಲ ಸೂಚಿಸಬಹುದು ಎಂಬ ನಿರೀಕ್ಷೆಯೊಂದಿಗೆ ಬಿಜೆಪಿ ಕೋವಿಂದ್ ಅವರನ್ನು ಆಯ್ಕೆ ಮಾಡಿದೆ.

ಹೀಗಾಗಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳೂ ಕೂಡ ದಲಿತ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಪ್ರಬಲ ಸ್ಪರ್ಧೆಯೊಡ್ಡಲು ಚಿಂತನೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ. ಇವರ ಜೊತೆ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ಸಹ ದಲಿತ ಅಭ್ಯರ್ಥಿಯಾಗಿರುವುದರಿಂದ ಅವರ ಹೆಸರನ್ನೂ ಪರಿಗಣಿಸಬಹುದು ಎಂದು ಹೇಳಾಗುತ್ತಿದೆ.

ನಮ್ಮ ಜೊತೆ ಅಭ್ಯರ್ಥಿ ಹೆಸರಿನ ಕುರಿತು ಬಿಜೆಪಿ ಚರ್ಚೆ ಮಾಡಿಯೇ ಇಲ್ಲ. ಇಂತಹ ತಂತ್ರಗಾರಿಕೆಯನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ನಿನ್ನೆ ಕಾಂಗ್ರೆಸ್ ಪಕ್ಷದ ವಕ್ತಾರ ಗುಲಾಂ ನಬಿ ಆಜಾ಼ದ್ ಅವರು ಹೇಳಿದ್ದಾರೆ.

ತಾವು ಬೇರೆಯದೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆಂದು ವಿಪಕ್ಷಗಳು ಹೇಳಿವೆ. ಹೀಗಾಗಿ ಈ ಬಾರಿ ರಾಷ್ಟ್ರಪತಿ ಚುನಾವಣೆ ಅವಿರೋಧ ಆಯ್ಕೆಯಾಗದೆ, ಜುಲೈ 17 ರಂದು ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಜು.20 ರಂದು ಹೊರಬೀಳುವ ಫಲಿತಾಂಶದಲ್ಲಿ ದೇಶದ ಪ್ರಥಮ ಪ್ರಜೆಯ ಹುದ್ದೆಯನ್ನು ಯಾರು ಅಲಂಕರಿಸಲಿದ್ದಾರೆ ಎಂಬುದು ತಿಳಿಯಲಿದೆ.

-ಎನ್.ಬಿ.

Leave a Reply

comments

Related Articles

error: