
ದೇಶಪ್ರಮುಖ ಸುದ್ದಿ
ಎಂಜಿನಿಯರಿಂಗ್ ಕೋರ್ಸ್ಗೂ ರಾಷ್ಟ್ರೀಯ ಅರ್ಹತಾ ಪರೀಕ್ಷೆ ?
ಕೊಯಮತ್ತೂರು, ಜೂ.20 : ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ – ಎನ್ಇಟಿ ಬರೆಯಬೇಕು ಎಂಬ ನಿಯಮ ಜಾರಿಯಾಗುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ – ಎಐಸಿಟಿಇ ಹೇಳಿದೆ.
2019-20ರ ಶೈಕ್ಷಣಿಕ ವರ್ಷದಿಂದ ಎನ್ಇಟಿ ಜಾರಿಗೊಳಿಸುವ ಆಲೋಚನೆ ಇದೆ. ಎಲ್ಲಾ ಬಗೆಯ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಒಂದೇ ಅರ್ಹತಾ ಪರೀಕ್ಷೆ ಬರೆಯುವ ನಿಯಮಕ್ಕೆ ಎಐಸಿಟಿಇ ಅನುಮತಿ ನೀಡಿದೆ. ಆದರೆ ಕೆಲವು ರಾಜ್ಯಗಳು ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾರಣದಿಂದ ಈ ನಿರ್ಧಾರವನ್ನು ಮುಂದೂಡಲಾಗಿದೆ ಎಂದು ಸೋಮವಾರ ಎಐಸಿಟಿಇ ಅಧ್ಯಕ್ಷ ಅನಿಲ್ ಡಿ. ಸಹಸ್ರಬುದ್ಧೆ ಹೇಳಿದ್ದಾರೆ.
ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹೆಚ್ಚು ಅಂಕ ಪಡೆದ ಆಯಾ ರಾಜ್ಯಗಳ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಪ್ರಥಮ ಎಂದೇ ಪರಿಗಣಿಸಲಾಗುತ್ತದೆ. ಅಂಥ ಅಭ್ಯರ್ಥಿಗಳು ಐಐಟಿಗೂ ಪ್ರವೇಶ ಪಡೆಯಬಹುದು. ಎನ್ಇಟಿ ಜಾರಿ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಪ್ರಶ್ನೆಪತ್ರಿಕೆಗಳ ಸ್ವರೂಪ ಬದಲಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಈ ಉಪಯೋಗಗಳ ಕುರಿತು ರಾಜ್ಯಗಳಿಗೆ ಮಂಡಳಿ ಮನವರಿಕೆ ಮಾಡಿಕೊಡಲಿದೆ ಎಂದು ಅವರು ಹೇಳಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ :
ಪ್ರಾದೇಶಿಕ ಭಾಷೆಗಳಲ್ಲಿ ಓದಿದ ಮತ್ತು ಗ್ರಾಮೀಣ ಬಡ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವ ಸಲುವಾಗಿ ವಿದ್ಯಾರ್ಥಿ ತರಬೇತಿ ಕಾರ್ಯಕ್ರಮ ರೂಪಿಸಲಾಗುವುದು. ಹೊಸದಾಗಿ ನೇಮಕಗೊಳ್ಳಲಿರುವ ಶಿಕ್ಷಕರಿಗೂ ಇಂತಹುದೇ ಕಾರ್ಯಕ್ರಮ ರೂಪಿಸುವ ಚಿಂತನೆ ಇದೆ ಎಂದು ಸಹಸ್ರಬುದ್ಧೆ ಅವರು ಹೇಳಿದ್ದಾರೆ.
-ಎನ್.ಬಿ.