ಪ್ರಮುಖ ಸುದ್ದಿಮೈಸೂರು

ಕೊನೆಗೂ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಮಾಜಿ ಸಂಸದ ಹೆಚ್. ವಿಶ್ವನಾಥ್

ಮೈಸೂರು,ಜೂ.20:-  ಮಾಜಿ ಸಂಸದ ಹೆಚ್.  ವಿಶ್ವನಾಥ್ ಕಾಂಗ್ರೆಸ್ ಗೆ ಕೊನೆಗೂ ಗುಡ್ ಬೈ ಹೇಳಿದ್ದಾರೆ.  ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಹೊರನಡೆಯುವ ಸೂಚನೆ ನೀಡಿದ್ದ ವಿಶ್ವನಾಥ್ ಮಂಗಳವಾರ  ಅಧಿಕೃತವಾಗಿ ಪಕ್ಷ ತ್ಯಜಿಸುವ ನಿರ್ಧಾರ ಪ್ರಕಟಿಸಿದರು. ಮೈಸೂರಿನ ಖಾಸಗಿ ಹೋಟಲ್ ನಲ್ಲಿ ಈ ಸಂಬಂಧ ಬೆಂಬಲಿಗರ ಸಭೆ ನಡೆಸುತ್ತಿರುವ ವಿಶ್ವನಾಥ್  ಪಕ್ಷ ತ್ಯಜಿಸುವ ನಿರ್ಧಾರ ಪ್ರಕಟಿಸಿದ್ದು,  ಬೆಂಗಳೂರಿಗೆ ತೆರಳಿ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಲಿರುವುದಾಗಿ ತಿಳಿಸಿದರು.

ಜೂನ್ 23 ರಂದು ಹೆಚ್.ವಿಶ್ವನಾಥ್ ರಾಜೀನಾಮೆ ಸಲ್ಲಿಸಲಿದ್ದಾರೆ. ಜುಲೈ ಮೊದಲ ವಾರದಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ. ಮಂಗಳವಾರ  ಮೈಸೂರಿನಲ್ಲಿ ಕಾಂಗ್ರೆಸ್ ನಾಯಕನಾಗಿ ಬೆಂಬಲಿಗರ ಕೊನೆಯ ಸಭೆ ನಡೆಸುತ್ತಿದ್ದು, ಈಗಾಗಲೇ ಕೆ.ಆರ್‌.ನಗರ, ಮಡಿಕೇರಿಯಲ್ಲಿ ಸಭೆ ನಡೆಸಿದ್ದರು.   ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಮಾತನಾಡಿ ನಾನು ಜೆಡಿಎಸ್ ಪಕ್ಷದಲ್ಲಿ ಮೇಯರ್ ಆಗಿದ್ದೆ. ವಿಶ್ವನಾಥ್ ಅವರೆ ನೀವು ಜೆಡಿಎಸ್  ಗೆ ಬನ್ನಿ ಎಂದು ವಿಶ್ವನಾಥ್ ಅವರನ್ನು ಆಹ್ವಾನಿಸಿದರು. ಹೆಚ್.ಡಿ.ಕುಮಾರಸ್ವಾಮಿ ಅವರನ್ನು  ಬಲ ಪಡಿಸಲು ನೀವು ಜೆಡಿಎಸ್ ಪಕ್ಷಕ್ಕೆ ಬನ್ನಿ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತಮ್ಮ ಮೊನಚು ಮಾತುಗಳ ಮೂಲಕವೇ ಟೀಕಾಪ್ರಹಾರ ಮಾಡಿದ ಎಚ್. ವಿಶ್ವನಾಥ್ ಅವರು ನಾನು ಸಿದ್ದರಾಮಯ್ಯ ಎದುರುಬದುರಾಗಿ ಆರು ತಿಂಗಳಾಯಿತು. ನಲವತ್ತು ವರ್ಷಗಳ ತಾಯಿಯ ಸಂಬಂಧದಂತಿರುವ ಕಾಂಗ್ರೆಸ್ ತೊರೆಯುವ ಪರಿಸ್ಥಿತಿ ಬಂದಿದೆ ಎಂದು ಹೇಳುತ್ತ  ಬಂದರೂ ಕೆಪಿಸಿಸಿ ಅಧ್ಯಕ್ಷರಾಗಲಿ, ಇತರ ಯಾವ ನಾಯಕರಾಗಲಿ ಇದಕ್ಕೆ ಸ್ಪಂದಿಸಲೇ ಇಲ್ಲ. ಎಲ್ಲದಕ್ಕೂ ಉಡಾಫೆಯಿಂದ ನಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್  ನಾಯಕರ ವಿರುದ್ಧ  ಹರಿಹಾಯ್ದರು.  ಸಿದ್ದರಾಮಯ್ಯನವರೇ ನೀವು ಕಾಂಗ್ರೆಸ್ ಪಕ್ಷವನ್ನು ಕಟ್ಟುತ್ತಿದ್ದೀರಾ ಅಥವಾ ಕೆಡುವುತ್ತಿದ್ದೀರಾ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು. ಮುಖ್ಯಮಂತ್ರಿಗಳೇ ಮೈಸೂರಿಗೆ ನೀವು ಶಾಶ್ವತವಾಗಿ ಕೊಟ್ಟ ಯೋಜನೆ ಏನು ? ಈ ವರೆಗೂ ನೀವು ಮೈಸೂರಿಗೆ ಹಲವು ಬಾರಿ ಬಂದಿದ್ದೀರಿ ಆದರೆ ಮೈಸೂರಿನ ಬಗ್ಗೆ ಯಾರನ್ನು ಕರೆದು ಮಾತನಾಡಿದ್ದೀರಿ,  ನಾನು ನನ್ನ ವ್ಯಕ್ತಿತ್ವ ಕಳೆದುಕೊಳ್ಳಲು ಸಿದ್ದನಿಲ್ಲ. ನಾನು ಮರೀಗೌಡ ಅಲ್ಲ. ನಿಮ್ಮ ತವರಿನಲ್ಲಿ ಕಾಂಗ್ರೆಸ್ ಎಲ್ಲಿ ಅಧಿಕಾರ ಇದೆ ಹೇಳಿ. ನಂಜನಗೂಡು ಗುಂಡ್ಲುಪೇಟೆ ಚುನಾವಣೆ ಹೇಗೆ ಗೆದ್ದೀದ್ದೀರಾ ಎಂದು ಎಲ್ಲರಿಗೂ ಗೊತ್ತು. ಉಪ ಚುನಾವಣೆಯಲ್ಲಿ ಗೆದ್ದ ಮಾದರಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲ್ಲು ಸಾಧ್ಯವಿಲ್ಲ. 20 ವರ್ಷಗಳಿಂದ ಕುರುಬರು ತನು,  ಮನ, ಧನ ಅರ್ಪಿಸಿದರು.  ಆದರೆ ನೀವು ಮಾಡಿದ್ದೇನು? ಎಲ್ಲರನ್ನೂ ತುಳಿಯುತ್ತೀದ್ದೀರಿ. ಸಿದ್ದರಾಮಯ್ಯ ಇಡೀ ಕುರುಬ ಸಮಾಜ ಮತ್ತು ಕಾಂಗ್ರೆಸ್ ಪಕ್ಷವನ್ನು ತುಳಿದು ಹಾಕಿರುವ ಅತ್ಯಂತ ಸಣ್ಣ ತನದ ವ್ಯಕ್ತಿ. ಸಿದ್ದರಾಮಯ್ಯ ವ್ಯಕ್ತಿತ್ವ ಈ ರೀತಿ ಸಣ್ಣತನದಿಂದ ಕೂಡಿದೆ ಎಂಬ ಸಣ್ಣ ಸುಳಿವು ಸಿಕ್ಕಿದ್ದರೂ ಅವರನ್ನು ಕಾಂಗ್ರೆಸ್ ಪಕ್ಷದೊಳಕ್ಕೆ ಬಿಟ್ಟು ಕೊಳ್ಳುತ್ತಿರಲಿಲ್ಲ ಎಂದು ಹರಿಹಾಯ್ದರು.

ನನ್ನ ಜೀವ ಇರುವವರೆಗೂ ಕಾಂಗ್ರೆಸ್ ನನ್ನ ತಾಯಿ. ಆದರೆ ಕಾಂಗ್ರೆಸ್ ನಡೆಸುವವರ ನಡವಳಿಕೆ ಬಗ್ಗೆ ಬೇಸರಗೊಂಡು ಪಕ್ಷ ಬಿಡುತ್ತಿದ್ದೇನೆ. ರಾಜ್ಯದಲ್ಲಿ ರಾಜೀವ್ ಗಾಂಧಿ, ಇಂದಿರಾಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕಾಂಗ್ರೆಸ್ ಇಲ್ಲ. ರಾಜ್ಯದಲ್ಲಿ ಇರೋದು ಸಿದ್ದರಾಮಯ್ಯರ ಕಾಂಗ್ರೆಸ್. ಆ ಕಾಂಗ್ರೆಸ್ ‌ನಲ್ಲಿ ನಾನು ಇರುವುದಿಲ್ಲ. ಇನ್ನೊಂದು ವಾರದಲ್ಲಿ ರಾಜ್ಯದ ರಾಜಧಾನಿಗೆ ತೆರಳಿ ರಾಜೀನಾಮೆ ಸಲ್ಲಿಸುತ್ತೇನೆ. ರಂಜಾನ್ ಹಬ್ಬಕ್ಕೂ ಮಂಚೆಯೇ ರಾಜೀನಾಮೆ ನೀಡುತ್ತೇನೆ. ಮುಂದೆ ಯಾವ ಪಕ್ಷಕ್ಕೆ ಹೋಗಬೇಕು ಅಂತ ಇನ್ನು ನಿರ್ಧಾರ ಮಾಡಿಲ್ಲ. ಎಲ್ಲವನ್ನೂ ಶೀಘ್ರದಲ್ಲೆ ಹೇಳುತ್ತೇನೆ ಎಂದರು. (ಕೆ.ಎಸ್,ಆರ್.ವಿ, ಎಸ್.ಎಚ್)

Leave a Reply

comments

Related Articles

error: