ಕರ್ನಾಟಕಪ್ರಮುಖ ಸುದ್ದಿ

ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆ ಸಂಪೂರ್ಣ ನಿಲ್ಲಿಸಲು ಒತ್ತಾಯಿಸಿ ಟ್ವೀಟರ್ ಅಭಿಯಾನ

ಬೆಂಗಳೂರು, ಜೂನ್ 20 : ಪ್ರಾದೇಶಿಕ ಭಾಷಾ ನೀತಿಯನ್ನು ಮುರಿದು ನಮ್ಮ ಮೆಟ್ರೋ ರೈಲಿನಲ್ಲಿ ಹಿಂದಿ ಭಾಷೆ ಬಳಸುತ್ತಿರುವುದನ್ನು ವಿರೋಧಿಸಿ ಬನವಾಸಿ ಬಳಗವು ಟ್ವಿಟರ್ ಅಭಿಯಾನವನ್ನು ಆಯೋಜಿಸಿದೆ

ಚೆನ್ನೈ, ಕೊಲ್ಕತ್ತಾ, ದೆಹಲಿ ಮುಂತಾದ ಕಡೆ ಇರುವ ಮೆಟ್ರೋ ರೈಲಿನಲ್ಲಿ ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್ ಎಂಬ ಎರಡು ಭಾಷೆಯ ನೀತಿ ಇರುವಾಗ ಇಲ್ಲಿ ಮಾತ್ರ ಮೂರು ಭಾಷೆ ಸೇರಿಸುವುದು ಏಕೆ? ಎಂಬ ಕೂಗು ಮತ್ತೆ ಎದ್ದಿದೆ. ಜೂನ್ 20 ರ ಸಂಜೆ 6 ರಿಂದ ನಮ್ಮ ಮೆಟ್ರೋನಲ್ಲಿ ಅನವಶ್ಯಕವಾಗಿ ಬಳಸಲಾಗುತ್ತಿರುವ ಹಿಂದಿ ಭಾಷೆಯನ್ನು ವಿರೋಧಿಸಿ ಬನವಾಸಿ ಬಳಗವು ಟ್ವಿಟರ್ ಅಭಿಯಾನವನ್ನು ಆಯೋಜಿಸಿದೆ.

#nammametrohindibeda ಹಾಗೂ #nammametrokannadasaaku ಹ್ಯಾಷ್ ಟ್ಯಾಗ್‍ನಲ್ಲಿ ಟ್ವೀಟ್ ಮಾಡಿ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಹಿಂದಿ ಹೇರಿಕೆಯ ವಿರುದ್ಧ ದನಿ ಎತ್ತಲು ಹಾಗೂ ಸಮಾನ ಭಾಷಾ ನೀತಿಗಾಗಿ ಆಗ್ರಹಿಸಿ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸುವಂತೆ ಬನವಾಸಿ ಬಳಗ ಮನವಿ ಮಾಡಿದೆ.

ನಮ್ಮ ಮೆಟ್ರೋ ನಮ್ಮದಾಗೇ ಉಳಿಯಬೇಕು ಎಂದರೆ ಅನವಶ್ಯಕ ಹಿಂದಿ ಹೇರಿಕೆ ನಿಲ್ಲಬೇಕು. ಹಿಂದಿ ಭಾಷೆ ಬಳಕೆ ಪ್ರಮಾಣ ಮೊದಲಿಗಿಂತ ಸ್ವಲ್ಪ ಕಡಿಮೆಯಾಗಿದ್ದರೂ ಪುರ್ಣ ಪ್ರಮಾಣದಲ್ಲಿ ನಿಂತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಮತ್ತು ಮೆಟ್ರೋ ಅಧಿಕಾರಿಗಳ ಗಮನ ಸೆಳೆದು, ಬೆಂಗಳೂರು ಮೆಟ್ರೋದಲ್ಲಿ ಕನ್ನಡ ಸಾರ್ವಭೌಮತ್ವ ಎತ್ತಿ ಹಿಡಿಯಲು ಒತ್ತಾಯಿಸುವ ಈ ಟ್ವಿಟರ್ ಅಭಿಯಾನವನ್ನು ಆಯೋಜಿಸಲಾಗಿದೆ.

-ಎನ್.ಬಿ.

Leave a Reply

comments

Related Articles

error: