ಕರ್ನಾಟಕಪ್ರಮುಖ ಸುದ್ದಿ

ದಿನಕ್ಕೆ 3 ಲಕ್ಷ ಜನ ಪ್ರಯಾಣ : ಐಟಿ ಮಂದಿಯ ಮೆಚ್ಚುಗೆ ಪಡೆದ ಮೆಟ್ರೋ ರೈಲು

ಬೆಂಗಳೂರು, ಜೂ.20 : ನಮ್ಮ ಮೆಟ್ರೋ ರೈಲಿನಲ್ಲಿ ಸೋಮವಾರ 3 ಲಕ್ಷಕ್ಕೂ ಅಧಿಕ ಜನ ಪ್ರಯಾಣ ಮಾಡಿ ದಾಖಲೆ ಬರೆದಿದ್ದಾರೆ. ಮೆಟ್ರೊ ಮೊದಲ ಹಂತ ಪೂರ್ಣ ಪ್ರಮಾಣದಲ್ಲಿ ಆರಂಭವಾದ ನಂತರ ನೇರಳೆ ಮತ್ತು ಹಸಿರು ಎರಡೂ ಮೆಟ್ರೊ ಮಾರ್ಗಗಳಲ್ಲಿ 3,07,543 ಮಂದಿ ಪ್ರಯಾಣಿಕರು ಸೋಮವಾರ ರಾತ್ರಿ 10 ಗಂಟೆ ಹೊತ್ತಿಗೆ ಪ್ರಯಾಣಿಸಿದ್ದು, ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 50 ರಷ್ಟು ಹೆಚ್ಚಳವಾಗಿದೆ.

ಮೆಟ್ರೊ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದ ಕಾರಣ ಎರಡು ನಿಮಿಷಗಳ ಅಂತರದಲ್ಲಿ ಮೂರು ವಿಶೇಷ ರೈಲುಗಳು ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ಬೈಯಪ್ಪನಹಳ್ಳಿಗೆ ಬೆಳಗ್ಗೆ 9.40 ರಿಂದ 10.30 ರ ಒಳಗೆ ಸಂಚರಿಸಿವೆ. ನಮ್ಮ ಮೆಟ್ರೊದ 6 ವರ್ಷಗಳ ಇತಿಹಾಸದಲ್ಲಿ 4 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಮೆಟ್ರೋ ರೈಲು ಸಂಚರಿಸಿದ್ದು ಇದೇ ಮೊದಲು.

ನಾಗಸಂದ್ರದಿಂದ ಯೆಲಚೇನಹಳ್ಳಿಯಿಂದ ಬೈಯಪ್ಪನಹಳ್ಳಿಯ ಸುತ್ತಮುತ್ತಲ ಐಟಿ ಉದ್ಯೋಗಿಗಳು ಖುಷಿಯಿಂದ ನಿನ್ನೆ ಮೆಟ್ರೊದಲ್ಲಿ ಸಂಚರಿಸಿದರು. ಈ ಭಾಗದಲ್ಲಿ ಐಟಿ ಕಂಪನಿಗಳು ನೆಲೆಯೂರಿದ್ದು ಮೆಟ್ರೊ ರೈಲು ವ್ಯವಸ್ಥೆ ಐಟಿ ಉದ್ಯೋಗಿಗಳಿಗೆ ತುಂಬಾ ಅನುಕೂಲವಾಗಿ ಪರಿಣಮಿಸಿದೆ.

ಇದರ ಜೊತಗೆ ಬಿಎಂಟಿಸಿ ಫೀಡರ್ ಬಸ್‍ಗಳು ಮತ್ತು ಆಫೀಸ್ ಕ್ಯಾಬ್ ಸೇವೆಗಳು ಬೈಯಪ್ಪನಹಳ್ಳಿ, ಸ್ವಾಮಿ ವಿವೇಕಾನಂದ ರಸ್ತೆಯಿಂದ ಐಟಿ ಕಂಪೆನಿಗಳು ಹೆಚ್ಚಾಗಿರುವ ಐಟಿಪಿಎಲ್, ವೈಟ್ ಫೀಲ್ಡ್ ಮತ್ತು ಕೆ.ಆರ್.ಪುರಂ ಕಡೆಗೆ ಸಂಚರಿಸುತ್ತಿರುವುದರಿಂದ ಐಟಿ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಿ ಪರಿಣಮಿಸಿದೆ.

-ಎನ್.ಬಿ.

Leave a Reply

comments

Related Articles

error: