ಕರ್ನಾಟಕಪ್ರಮುಖ ಸುದ್ದಿ

ಖಾಸಗಿ ಆಸ್ಪತ್ರೆಗಳಿಗೆ ಲಂಗು ಲಗಾಮು ಹಾಕುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ಮನವಿ

ಪ್ರಮುಖಸುದ್ದಿ,ರಾಜ್ಯ(ಬೆಂಗಳೂರು) ಜೂ.20:- ಖಾಸಗಿ ಆಸ್ಪತ್ರೆಗಳಿಗೆ ಲಂಗು ಲಗಾಮು ಹಾಕುವ ಉದ್ದೇಶದ 2017ರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ. ಆರ್. ರಮೇಶ್‌ಕುಮಾರ್ ವಿಧಾನಸಭೆಯಲ್ಲಿ ಮಂಗಳವಾರ ಬಲವಾಗಿ ಸಮರ್ಥಿಸಿಕೊಂಡು ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು.
ಈ ವಿಧೇಯಕವನ್ನು ಏಕಾ-ಏಕಿ ತಂದಿಲ್ಲ. ಇದರ ಮುಖಾಂತರ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರ ಮೇಲೆ ದ್ವೇಷ ಸಾಧಿಸುವ ಉದ್ದೇಶವೂ ಇಲ್ಲ. ತಪ್ಪು ತಿಳುವಳಿಕೆಯಿಂದಾಗಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಮತ್ತು ವೈದ್ಯರು ಪ್ರತಿಭಟನೆ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ಅಭಿಪ್ರಾಯವನ್ನೂ ಕೇಳಬೇಕಾಗುತ್ತದೆ ಎಂದು ಸಚಿವರು ಹೇಳಿದರು. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ಸಂಗ್ರಹ, ಬಡ ರೋಗಿಗಳಿಗೆ ಆಗುತ್ತಿರುವ ಅನ್ಯಾಯ ಮತ್ತಿತರ ಅಂಶಗಳನ್ನು ಎಳೆಎಳೆಯಾಗಿ ಸಚಿವರು ಸದನದ ಮುಂದಿಟ್ಟಾಗ ಇಡೀ ಸದನ ಅವರ ಮಾತುಗಳನ್ನು ತದೇಕಚಿತ್ತದಿಂದ ಆಲಿಸಿತು. ಬಹುತೇಕ ಸದಸ್ಯರು ಅವರ ಅಭಿಪ್ರಾಯಕ್ಕೆ ತಲೆತೂಗುವಂತ ಸ್ಥಿತಿ ನಿರ್ಮಾಣವಾಗಿತ್ತು. ಜನಹಿತ ರಕ್ಷಣೆ ಮಾಡುವ ಉದ್ದೇಶದ ಈ ವಿಧೇಯಕಕ್ಕೆ ಸದನ ಅಂಗೀಕಾರ ನೀಡಬೇಕು ಎಂದು ರಮೇಶ್‌ಕುಮಾರ್ ಮನವಿ ಮಾಡಿದರು. ಈ ವಿಧೇಯಕ ಜಾರಿಗೆ ಬಂದರೆ ನಾಳೆನೇ ಎಲ್ಲರನ್ನೂ ಜೈಲಿಗೆ ಹಾಕುತ್ತಾರೆಂಬ ಶಂಕೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಮತ್ತು ವೈದ್ಯರಲ್ಲಿ ಮೂಡಿದೆ. ಇದು ಸರಿಯಲ್ಲ. 1976ರಲ್ಲೇ ಈ ರೀತಿಯ ಕಾಯ್ದೆ ಜಾರಿಗೆ ಬಂದಿದೆ. 2007 ರಲ್ಲೂ ಕಾಯ್ದೆ ರೂಪಿಸಲಾಗಿದೆ. ನಾವೇನೂ ದಿಢೀರ್‌ನೆ ತಂದಿಲ್ಲ. ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ವಿಧೇಯಕ ರೂಪಿಸಲಾಗಿದೆ. ಖಾಸಗಿ ವೈದ್ಯಕೀಯ ಸಂಸ್ಥೆಗಳು ಬೇರೆ, ವೃತ್ತಿಪರ ವೈದ್ಯರು ಬೇರೆ ಒಂದಕ್ಕೊಂದು ಸಂಬಂಧವಿಲ್ಲ. ನಾವು ಸಂಸ್ಥೆಗಳ ಮೇಲಷ್ಟೆ ನಿಯಂತ್ರಣ ಹೇರಲು ಹೊರಟಿರುವುದು ವೈದ್ಯರ ಮೇಲಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರಿ ಆಸ್ಪತ್ರೆಗಳನ್ನು ವಿಧೇಯಕ ವ್ಯಾಪ್ತಿಗೆ ತಂದಿಲ್ಲ ಎಂದು ಕೆಲವರು ಆರೋಪ ಮಾಡಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳು ಈಗಾಗಲೇ ಸರ್ಕಾರದ ನಿಯಂತ್ರಣದಲ್ಲಿವೆ. ಆಸ್ಪತ್ರೆಗಳಿಗೆ ನೇಮಕ ಮಾಡುವ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಾಗಲೇ ಹಲವು ರೀತಿಯ ಪರಿಶೀಲನೆಗೊಳಪಡಿಸಿ ಸೇವೆಗೆ ಸೇರಿದ ನಂತರವೂ ಅವರ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲಾಗುವುದು. ಹಾಗಾಗಿ ಅವರಿಗೆ ಪ್ರತ್ಯೇಕ ನಿಯಂತ್ರಣ ಅಗತ್ಯವಿಲ್ಲ ಎಂದರು.
ಇದುವರೆಗೂ ಆ ರೀತಿ ವ್ಯವಸ್ಥೆ ಇರಲಿಲ್ಲ. ವಿಧೇಯಕದ ಮೂಲಕ ಯಾವ ಚಿಕಿತ್ಸೆಗೆ ಎಷ್ಟು ಖರ್ಚು ಎಂಬ ದರಗಳ ಸನ್ನದನ್ನು ಪ್ರತಿಯೊಂದು ಖಾಸಗಿ ಆಸ್ಪತ್ರೆಗಳಲ್ಲೂ ಕಡ್ಡಾಯವಾಗಿ ಹಾಕಬೇಕೆಂಬ ಷರತ್ತನ್ನು ವಿಧಿಸಲು ಉದ್ದೇಶಿಸಿದ್ದೇವೆ ಎಂದರು. ದರವನ್ನು ನಾವು ನಿಗದಿ ಮಾಡುವುದಿಲ್ಲ. ಇದಕ್ಕೊಂದು ತಜ್ಞರ ಸಮಿತಿ ಇರುತ್ತದೆ. ಅದರಲ್ಲಿ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ಸೇರಿದಂತೆ ವಿವಿಧ ವಲಯಗಳ ಪ್ರತಿನಿಧಿಗಳು ಇರುತ್ತಾರೆ ಎಂದರು. ಹೃದಯ ರೋಗಿಗಳಿಗೆ ಅಳವಡಿಸುವ ಸ್ಟೆಂಟ್ ದರವನ್ನು ಸರ್ಕಾರಿ ಸ್ವಾಮ್ಯದ ಜಯದೇವ ಆಸ್ಪತ್ರೆಯಲ್ಲಿ 50 ಸಾವಿರ ನಿಗದಿ ಮಾಡಿದ್ದರೆ, ಖಾಸಗಿ ಆಸ್ಪತ್ರೆಯಲ್ಲಿ 2 ಲಕ್ಷ ದವರೆಗೂ ವಸೂಲಿ ಮಾಡಲಾಗುತ್ತಿದೆ. ಇದನ್ನು ನಿಯಂತ್ರಣ ಮಾಡಬಾರದೆ ಎಂದು ಪ್ರಶ್ನಿಸಿದ ಅವರು, ಸಮಿತಿ ನಿಗದಿ ಮಾಡುವ ದರದಲ್ಲಿ ಚಿಕಿತ್ಸೆ ಕೊಡಬೇಕಾಗುತ್ತದೆ ಎಂದರು.
ದುಬಾರಿ ದರ ವಸೂಲಿ ಮಾಡುವ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ವೈದ್ಯರಿಗೆ 25 ಸಾವಿರ ರೂ. ಕ್ಕಿಂತ ಕಡಿಮೆ ಇಲ್ಲದ, ಆದರೆ 5 ಲಕ್ಷ ರೂ.ಗಳವರೆಗೆ ದಂಡ ಮತ್ತು 6 ತಿಂಗಳಿಗಿಂತ ಕಡಿಮೆ ಇಲ್ಲದ ಆದರೆ 3 ವರ್ಷಗಳಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ವಿಧಿಸಲು ವಿದೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ದಂಡ ಪ್ರಮಾಣ 10 ಲಕ್ಷ ರೂ.ಗಳಿಗೆ ನಿಗದಿ ಮಾಡಲಾಗಿದೆ ಎಂದರು.
ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಕ್ ಔಷಧ ಮಳಿಗೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. 200 ಮಳಿಗೆ ಪ್ರಾರಂಭಿಸಲು ಕೇಂದ್ರ ಸಚಿವ ಅನಂತಕುಮಾರ್ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಕಡಿಮೆ ದರದಲ್ಲಿ ಬಡ ರೋಗಿಗಳಿಗೆ ಔಷಧಿ ಸಿಗಲಿದೆ. ಹೊರಗೆ ಖರೀದಿ ಮಾಡುವ ಬದಲು ಈ ಮಳಿಗೆಗಳಲ್ಲಿ ಖರೀದಿ ಮಾಡುವವರಿಗೆ ಔಷಧಿ ದರ ಶೇ. 70 ರಿಂದ 75 ರಷ್ಟು ಕಡಿಮೆ ದರ ಸಿಗಲಿದೆ. ಹೀಗೆ ಮಾಡುವುದರಿಂದ ಔಷಧ ಉದ್ಯಮಕ್ಕೆ ತೊಂದರೆಯಾಗಲಿದೆ. ಅದಕ್ಕಾಗೇ ಅವರು ವಿರೋಧ ಮಾಡುತ್ತಿದ್ದಾರೆ ಎಂದರು.
ನಾನು ಸಚಿವನಾಗಿರುವುದು ಉದ್ದಿಮೆಗಳ ಋಣ ತೀರಿಸಲೋ ಅಥವಾ ಜನರ ಋಣ ತೀರಿಸಲೋ, ಅವರು ಹೇಳಿದಂಗೆ ಮಾಡುವುದಾದರೆ ಈ ಸರ್ಕಾರ, ಸದನ ಏಕಿರಬೇಕು ಎಂದರು. ಯಶಸ್ವಿನಿ ಯೋಜನೆಯಡಿ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದು, ಈ ಪೈಕಿ ಖಾಸಗಿ ಆಸ್ಪತ್ರೆಗಳಿಗೆ ಶೇ. 80 ರಷ್ಟು ಹಣ ಹೋಗಿದೆ. ಅದೇ ರೀತಿ ಉಳಿದ ಚಿಕಿತ್ಸೆಗೂ ಸರ್ಕಾರ ನೀಡುವ ಹಣದ ಪೈಕಿ ಶೇ. 80 ರಷ್ಟು ಹಣ ಖಾಸಗಿಯವರಿಗೆ ಸೇರುತ್ತಿದೆ. ವಿಮಾ ಕಂಪೆನಿಗಳೇ ಆರೋಪಿಸಿರುವಂತೆ 349 ಖಾಸಗಿ ಆಸ್ಪತ್ರೆಗಳು ನಕಲಿ ಬಿಲ್‌ಗಳನ್ನು ಸೃಷ್ಟಿಸಿರುವ ಆರೋಪ ಎದುರಿಸುತ್ತಿವೆ. ಇವುಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ರಮೇಶ್‌ಕುಮಾರ್ ಖಾಸಗಿ ಆಸ್ಪತ್ರೆಗಳಲ್ಲಿನ ವ್ಯವಸ್ಥೆಯನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಇಡೀ ಸದನ ಅವರ ಮಾತುಗಳನ್ನು ತದೇಕಚಿತ್ತದಿಂದ ಆಲಿಸಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: