ಕರ್ನಾಟಕಪ್ರಮುಖ ಸುದ್ದಿ

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ವೈದ್ಯಾಧಿಕಾರಿ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ ಅಂಗೀಕಾರ

ಪ್ರಮುಖಸುದ್ದಿ,ರಾಜ್ಯ(ಬೆಂಗಳೂರು)ಜೂ.20:-  ಸರ್ಕಾರಿ ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ಪ್ರಮಾಣವನ್ನು ವಾರ್ಷಿಕ ಶೇ. 5 ರಿಂದ 15 ಕ್ಕೆ ಏರಿಸುವ ಸಂಬಂಧದ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಮಂಗಳವಾರ ಸರ್ವಾನುಮತದ ಅಂಗೀಕಾರ ದೊರೆಯಿತು.

ಕೌನ್ಸಿಲಿಂಗ್ ಮುಖಾಂತರ ಶೇ. 5 ರಷ್ಟು ವೈದ್ಯರನ್ನು ಮಾತ್ರ ವಾರ್ಷಿಕ ವರ್ಗಾವಣೆ ಮಾಡಲು ಇದ್ದ ಅವಕಾಶವನ್ನು ಶೇ. 15 ಕ್ಕೆ ವಿಸ್ತರಿಸಲಾಗಿದೆ. ಶೇ. 5 ರಷ್ಟು ವೈದ್ಯರ ವರ್ಗಾವಣೆಗೆ ನಿಗದಿಪಡಿಸಿದ್ದರಿಂದ ಗ್ರಾಮೀಣ ಸೇವೆಗೆ ವೈದ್ಯರ ನೇಮಕಕ್ಕೆ ಇದ್ದ ಸಮಸ್ಯೆಯನ್ನು ವಿಧೇಯಕದ ಮುಖಾಂತರ ಪರಿಹರಿಸಲಾಗಿದೆ. ಇದಕ್ಕೂ ಮುನ್ನ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್‌ಕುಮಾರ್, ವಿಧೇಯಕವನ್ನು  ಆಲೋಚಿಸಿ ಅಂಗೀಕರಿಸುವಂತೆ ಸದಸ್ಯರಿಗೆ ಮನವಿ ಮಾಡಿದರಲ್ಲದೆ, ಇದರ ಉದ್ದೇಶ ಮತ್ತು ಕಾರಣಗಳನ್ನು ವಿವರಿಸಿದರು. ಒಂದೇ ಸ್ಥಳದಲ್ಲಿ ಹತ್ತು ವರ್ಷಗಳನ್ನು ಪೂರೈಸಿದ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ. ಸಾರ್ವಜನಿಕರ ಹಿತಾಸಕ್ತಿಯಿಂದ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲು ಈ ತಿದ್ದುಪಡಿ ತರಲಾಗಿದೆ ಎಂದರು.  ಇದೊಂದು ಸರಳವಾದ ವಿಧೇಯಕವಾಗಿದ್ದು, ಸದಸ್ಯರು ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು. ರಾಜ್ಯದ ಆರೋಗ್ಯ ಇಲಾಖೆಯಲ್ಲಿ 40 ಸಾವಿರ ಉದ್ಯೋಗಿಗಳಿದ್ದಾರೆ. ವರ್ಗಾವಣೆ ಕೋರಿ 10 ಸಾವಿರ ಮನವಿಗಳು ಬರುತ್ತವೆ. ಇಂತಹ ಪರಿಸ್ಥಿತಿ ಹಿನ್ನೆಲೆಯಲ್ಲಿ ವೈದ್ಯರ ವರ್ಗಾವಣೆ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದರು.  ಜನಾನುರಾಗಿ ವೈದ್ಯರು ಎಷ್ಟೇ ವರ್ಷ ಒಂದೆಡೆ ಇದ್ದರೂ ಅವರನ್ನು ಮುಟ್ಟುವುದಿಲ್ಲ. ದೂರುಗಳು ಬಂದಲ್ಲಿ ಮಾತ್ರ ಅವರನ್ನು ವರ್ಗಾವಣೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ವಿಧೇಯಕವನ್ನು ಸ್ವಾಗತಿಸಿ ಮಾತನಾಡಿದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧೇಯಕ ಅತ್ಯಂತ ಸರಳವಾಗಿಯೇ ಇದೆ. ಆದರೆ, ವೈದ್ಯರು ಮತ್ತು ಸಿಬ್ಬಂದಿ ಕಾರ್ಯನಿರ್ವಹಣೆ ಕುರಿತು ನಿಗಾ ವಹಿಸಲು ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.  ಮತ್ತೊಬ್ಬ ಬಿಜೆಪಿ ಸದಸ್ಯ ಜೀವರಾಜ್, ಹೊಸದಾಗಿ ಸೇವೆಗೆ ಬಂದ ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ ಎಂಬುದನ್ನು ವಿಧೇಯಕದಲ್ಲಿ ಸೇರ್ಪಡೆ ಮಾಡಬೇಕು ಎಂದು ಸಲಹೆ ಮಾಡಿದರು. ವೈದ್ಯರ ವಿರುದ್ಧ ದೂರುಗಳು ಬಂದ ಕಡೆ ನಿಗದಿತ ಅವಧಿಗೆ ಮುನ್ನ ವರ್ಗಾವಣೆ ಮಾಡುವ ವಿವೇಚನಾಯುತ ಅಧಿಕಾರ ಸಚಿವರಿಗೆ ಇರಬೇಕು ಎಂದು ಹೇಳಿದರು.  ಜೆಡಿಎಸ್‌ನ ಕೋನರೆಡ್ಡಿ, ವೈದ್ಯರ ನೇಮಕ ಪ್ರಕ್ರಿಯೆ ಪೂರ್ಣಗೊಂಡ ನಂತರ ವಿಧೇಯಕ ತಂದಿದ್ದರೆ ಒಳ್ಳೆಯದಾಗುತ್ತಿತ್ತು ಎಂದು ಸಲಹೆ ಮಾಡಿದರು.  ನಂತರ ಸಭಾಧ್ಯಕ್ಷರು ವಿಧೇಯಕವನ್ನು ಮತಕ್ಕೆ ಹಾಕಿದಾಗ  ಸರ್ವಾನುಮತದ ಒಪ್ಪಿಗೆ ಪಡೆಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: