ಕರ್ನಾಟಕ

ಪ್ರೀತಿಸುವ, ಗೌರವಿಸುವ, ಭಾವನಾತ್ಮಕ ಸಂಬಂಧವನ್ನು ಬೆಸೆಯುವ ಗುಣ ಮನುಷ್ಯನಿಗೆ ಮುಖ್ಯ : ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ

ರಾಜ್ಯ(ಮಂಡ್ಯ) ಜೂ.20:- ಮಂಡ್ಯದ ಹಾಲಹಳ್ಳಿ ಕೆರೆ ಬಡಾವಣೆಯಲ್ಲಿ ಇಡುಗುಂಜಿ ಮಹಾಗಣಪತಿ ದೇವರ ವಿಗ್ರಹ ಪ್ರತಿಷ್ಠಾಪನ ಸಮಾರಂಭವನ್ನು ಬೇಬಿಮಠದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಭಾರತವನ್ನು ಕಟ್ಟಿರುವುದು ನಂಬಿಕೆಯ ಮೇಲೆ. ಅದೇ ರೀತಿ ಪ್ರತಿಯೊಬ್ಬರಿಗೂ ನಂಬಿಕೆ ಎಂಬುದು ಇರಬೇಕು ಎಂದು ಸಲಹೆ ನೀಡಿದರು.
ಹಿರಿಯರನ್ನು ಗೌರವಿಸಿ, ಪ್ರೀತಿಸಿ. ಮನೆಗೆ ಬರುವ ಅತಿಥಿಗಳಿಗೆ ಆತಿಥ್ಯ ನೀಡಿ, ಎಲ್ಲರನ್ನೂ ಪ್ರೀತಿಸಿ ಎಂದ ಅವರು, ಎಲ್ಲವನ್ನೂ ಭಾವನಾತ್ಮಕ ಸಂಬಂಧದ ಮೇಲೆ ಕಟ್ಟಬೇಕು. ಭಾವನೆಯೇ ಇಲ್ಲದಿದ್ದ ಮೇಲೆ ಗುಡಿ- ಗೋಪುರಗಳನ್ನು ಕಟ್ಟಿದರೆ ಏನೂ ಪ್ರಯೋಜನವಿಲ್ಲ ಎಂದು ನುಡಿದರು. ದೇವಸ್ಥಾನಗಳನ್ನು ಕಟ್ಟಿದರಷ್ಟೇ ಸಾಲದು, ದೇವಸ್ಥಾನ ಕಟ್ಟಿದ ಮೇಲೆ ಭಕ್ತಿ, ಶ್ರದ್ಧೆ ಇರಬೇಕು. ಶರಣಾಗತಿಯ ಮನಸ್ಸು ಇರಬೇಕು. ನಾನು ಎಂಬುದನ್ನು ಇಟ್ಟುಕೊಂಡು ಇಲ್ಲದ ದೇವರ ಪೂಜೆ ಮಾಡಿದರೆ ಫಲ ಸಿಗುವುದಿಲ್ಲ ಎಂದು ಹಿರಿಯರು ಹೇಳಿದ್ದಾರೆ. ಅದರಂತೆ ನಾನು ಎಂಬ ಅಹಂಕಾರವನ್ನು ನಮ್ಮಿಂದ ತೊಲಗಿಸಬೇಕು. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ, ಭಾವನಾತ್ಮಕ ಸಂಬಂಧವನ್ನು ಬೆಸೆಯುವ ಗುಣವನ್ನು ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಯುವಕರಿಗೆ ಒಳ್ಳೆಯ ಸಂಘಟನೆ ಮಾಡಿ ಜೀವನದ ಬದುಕು ಕಟ್ಟಿಕೊಳ್ಳಬೇಕು. ಮನಸ್ಸು ಪರಿಪಕ್ವಗೊಳಿಸಿಕೊಳ್ಳಬೇಕು. ನೆಮ್ಮದಿ, ಜೀವನ, ಆಚಾರ, ವಿಚಾರ, ನಡೆ-ನುಡಿಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಎಷ್ಟೇ ಪಂಡಿತನಾಗಿರಲಿ, ಹಣವಂತನಾಗಿರಲಿ ಮೇಲಿನ ಮುತ್ತುಗಳು ಇಲ್ಲದಿದ್ದ ಮೇಲೆ ಎಲ್ಲವೂ ವ್ಯರ್ಥವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಭಾನುಪ್ರಕಾಶ್ ಶರ್ಮಾ ಮಾತನಾಡಿ, 74 ಕೋಟಿ ಜೀವರಾಶಿಗಳಲ್ಲಿ ಮಾನವ ಜನ್ಮವೇ ಶ್ರೇಷ್ಠ. ಆ ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಸಂಸ್ಕಾರ ಎಂಬುದು ಬಹಳ ಮುಖ್ಯ. ಅದಕ್ಕೆ ಗುಡಿ- ದೇವಸ್ಥಾನಗಳನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು. ದೇವಸ್ಥಾನ ನಿರ್ಮಾಣ ಮಾಡುವುದಷ್ಟೇ ಅಲ್ಲ, ಭಗವಂತನ ಸಾನಿಧ್ಯವನ್ನು ಬೇಡಬೇಕು. ನಮ್ಮ ಮನಸ್ಸಿನ ಎಲ್ಲ ಕ್ಲೇಶಗಳು ದೂರಾಗಬೇಕಾದರೆ ದೇವಸ್ಥಾನದಲ್ಲಿ ಕುಳಿತು ಧ್ಯಾನ ಮಾಡಿದರೆ ಮನಸ್ಸು ನಿರಮ್ಮಳವಾಗುತ್ತದೆ. ಜಗತ್ತಿನ ಸೃಷ್ಠಿಯಲ್ಲಿ ಆದಿ ಪೂಜೆಯನ್ನು ಪಡೆದಿರುವ ಮಹಾಗಣಪತಿ ದೇವಸ್ಥಾನ ಸ್ಥಾಪನೆ ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.
ಗಿಡಗಳನ್ನು ನೆಡುವುದು ಮುಖ್ಯವಲ್ಲ, ಅದಕ್ಕೆ ನೀರೆರೆದು ಬೆಳೆಸಬೇಕು. ಅದು ಆಳವಾಗಿ ಬೇರು ಬಿಟ್ಟು ದೊಡ್ಡ ಮರವಾಗಬೇಕು. ಏನಾದರೂ ಒಂದು ಧರ್ಮ ಕಾರ್ಯವನ್ನು ಮಾಡುತ್ತಲೇ ಇರಬೇಕು ಎಂದು ಸಲಹೆ ನೀಡಿದರು. ರಜಾ ದಿನಗಳಲ್ಲಿ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಮಾಡಬೇಕು. ಆ ಮೂಲಕ ಮಕ್ಕಳಿಗೆ ಸಂಸ್ಕಾರ, ಭಕ್ತಿ, ಪರಂಪರೆಯನ್ನು ಮೂಡಿಸಬೇಕು. ಶಾಸ್ತ್ರಗಳ ಪರಿಚಯ ಮಾಡಬೇಕು. ಧರ್ಮ ಕಾರ್ಯಗಳನ್ನು ಮಾಡುವಂತೆ ಅವರಿಗೆ ಪ್ರೇರೇಪಿಸಬೇಕು. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಬೇಕು ಎಂದು ಹೇಳಿದರು. ಭಕ್ತಿಗೀತೆಗಳು, ಧರ್ಮ ಗ್ರಂಥಗಳನ್ನು ಪ್ರತೀ ಮನೆಗೆ ಹಂಚಿ, ಮಕ್ಕಳಿಗೆ ಸಂಸ್ಕಾರ ಕಲಿಸಿ, ಪ್ರತೀ ಸಂಕಷ್ಟ ಚತುರ್ಥಿ, ಪ್ರತೀ ಶನಿವಾರ ಮತ್ತು ಭಾನುವಾರ ಸೇರಿದಂತೆ 365 ದಿನಗಳೂ ದೇವರಿಗೆ ವಿಶೇಷ ಪೂಜೆ ಮಾಡಿದಲ್ಲಿ ದೇವಸ್ಥಾನವೂ ಅಭಿವೃದ್ಧಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಆದಿಚುಂಚನರಿ ಶಾಖಾ ಮಠದ  ಪುರುಷೋತ್ತಮಾನಂದನಾಥ ಸ್ವಾಮೀಜಿ, ಕಾಂಗ್ರೆಸ್ ಮುಖಂಡರಾದ ಅರವಿಂದ್, ರುದ್ರಪ್ಪ, ದೇವಸ್ಥಾನ ಸಮಿತಿ ಪದಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: