ಮೈಸೂರು

ಕಾವೇರಿ ವಿವಾದ : ದಸರಾಕ್ಕೆ ಪ್ರವಾಸಿಗರ ಸಂಖ್ಯೆ ಕುಸಿತ- ಮಂಕಾದ ಪ್ರವಾಸೋದ್ಯಮ

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಉದ್ಭವವಾಗಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದದಿಂದ ಎರಡು ರಾಜ್ಯಗಳ ಬಾಂಧವ್ಯವು ಹಳಸಿದ್ದು ಅದರ ದುಷ್ಪರಿಣಾಮ ನಾಡ ಹಬ್ಬ ಮೈಸೂರಿನ ದಸರಾ ಮೇಲೆ ಆಗಿದೆಯೇ..? ಎನ್ನುವ ಪ್ರಶ್ನೆಗೆ ಉತ್ತರ ಹೌದು ಎನ್ನಬಹುದು.

ನೆರೆ ರಾಜ್ಯ ತಮಿಳುನಾಡ ಪ್ರವಾಸಿಗರ ಸಂಖ್ಯೆ ತೀವ್ರವಾಗಿ ಕುಸಿದಿರುವುದೇ ಇದಕ್ಕೆ ಸಾಕ್ಷಿ. ಈಗಾಗಲೇ ವಿಶ್ವವಿಖ್ಯಾತ ದಸರಾ ಉತ್ಸವದ ಆಕರ್ಷಣಿಯ ಜಂಬೂ ಸವಾರಿಗೇ ಕೇವಲ ಮೂರೇ ದಿನಗಳು ಬಾಕಿ ಉಳಿದಿದ್ದು ದಸರಾ ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ ಎನ್ನುವುದಕ್ಕೆ ಅಂಕಿ ಅಂಶಗಳೇ ಇದಕ್ಕೆ ಸಾಕ್ಷಿಯಾಗಿದೆ.

ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದಲೂ ಪ್ರವಾಸಿಗರು ಮೈಸೂರು ದಸರಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಫಲಪುಷ್ಪ ಪ್ರದರ್ಶನ ವೀಕ್ಷಿಸಲು  ಆಗಮಿಸುತ್ತಿದ್ದರು. ಕಾವೇರಿ ವಿವಾದದಿಂದಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲೂ ತಮಿಳುನಾಡಿನ ಪ್ರವಾಸಿಗರ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಈ ಬಾರಿಯ ದಸರವೂ ಮಹಾರಾಷ್ಟ್ರದವರನ್ನು ಸೆಳೆದಿದ್ದು ಪ್ರತಿ ವರ್ಷಕ್ಕಿಂತಲೂ ಈ ವರ್ಷ ಮಹಾರಾಷ್ಟ್ರದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿನ ಆಗಮಿಸಿದ್ದಾರೆ. ಈ ವೇಳೆಗಾಗಲೇ ಮೈಸೂರಿನ ರಸ್ತೆಗಳು ನೆರೆ ರಾಜ್ಯಗಳ ವಾಹನಗಳಿಂದ ತುಂಬಿ ತುಳುಕುತ್ತಿದ್ದು ಹೋಟೆಲ್ ಗಳು ಮುಂಚಿತವಾಗಿಯೇ ಕಾಯ್ದಿರಿಸಿಕೊಳ್ಳುತ್ತಿದ್ದವು. ಆದರೆ, ಪ್ರಸಕ್ತ ಸಾಲಿನ ದಸರಾಗೆ ಪ್ರವಾಸಿಗರ ಕೊರತೆ ಕಾಡುತ್ತಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡ ವೃತ್ತಿಪರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ಮಾರ್ಗಸೂಚಿ ಫಲಕಗಳು : ಪ್ರತಿ ಐದು ನಿಮಿಷಕ್ಕೆ ಸುಮಾರು 25 ವಾಹನಗಳು ನಗರಕ್ಕೆ ಆಗಮಿಸುತ್ತವೆ ಎನ್ನುವ ದಾಖಲೆಯು ಬೆಂಗಳೂರು ಮತ್ತು ನೀಲಗಿರಿಯ ಚೆಕ್ ಪೋಸ್ಟ್ ಗಳಲ್ಲಿ ದಾಖಲಾಗಿವೆ. ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಈಗಾಗಲೇ ಸಂಚಾರದಲ್ಲಿ ಹಲವಾರು ಬದಲಾವಣೆಗಳನ್ನು ಮುಂಜಾಗೃತ ಕ್ರಮವಾಗಿ ಕೈಗೊಳ್ಳಲಾಗಿದ್ದು ಮೈಸೂರಿನ ಪ್ರಮುಖ ತಾಣಗಳಾದ ಚಾಮುಂಡಿ ಬೆಟ್ಟ, ಮೃಗಾಲಯ ಹಾಗೂ ಅರಮನೆ  ತಲುಪಲು ನಗರದ ಹಲವಾರು ಕಡೆ ಮಾರ್ಗಸೂಚಿ ಫಲಕಗಳನ್ನು ಹಾಕಲಾಗಿದೆ.

ಸುಲಿಗೆ ನಿಯಂತ್ರಣ : ಪ್ರವಾಸಿಗರನ್ನು ಸುಲಿಗೆ ಮಾಡುವ ಆಟೋ ಚಾಲಕರ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.. ಪ್ರೀ ಮತ್ತು ಪೋಸ್ಟ್ ಪೈಡ್ ಆಟೋಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದು ಈಗಾಗಲೇ ಆಟೋ ಹಾಗೂ ಖಾಸಗಿ ವಾಹನಗಳ ಚಾಲಕರಿಗೆ ಪ್ರವಾಸಿಗರ ಸುಲಿಗೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

Leave a Reply

comments

Related Articles

error: